

ಹುಬ್ಬಳ್ಳಿ: ರೈಲ್ವೆ ಖಾಸಗೀಕರಣ ವಿರೋಧಿಸಿ ಹಾಗೂ ಹುಬ್ಬಳ್ಳಿ - ಬೆಂಗಳೂರು ಮಧ್ಯೆ ಪ್ರಯಾಣಿಕರ ರೈಲುಗಳನ್ನು ಮೊದಲಿನಂತೆ ಮುಂದುವರಿಸುವಂತೆ ಆಗ್ರಹಿಸಿ ರೈಲ್ವೆ ಖಾಸಗೀಕರಣ ವಿರೋಧಿ ಅಭಿಯಾನದ ಕಾರ್ಯಕರ್ತರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಅಭಿಯಾನದ ಗಂಗಾಧರ ಬಡಿಗೇರ ಮಾತನಾಡಿ, ಹುಬ್ಬಳ್ಳಿ-ಬೆಂಗಳೂರು ಮಧ್ಯೆ ಸಂಚರಿಸುವ ರೈಲುಗಳನ್ನು ಲಾಕ್ಡೌನ್ನಿಂದಾಗಿ ಸ್ಥಗಿತಗೊಳಿಸಿದ್ದು, ಮತ್ತೆ ಪ್ರಾರಂಭಿಸಿಲ್ಲ. ಪ್ಯಾಸೆಂಜರ್ ರೈಲುಗಳನ್ನು ಎಕ್ಸ್ಪ್ರೆಸ್ ಆಗಿ ಬದಲಾಯಿಸಲಾಗಿದೆ. ಮಾರ್ಗ ಮಧ್ಯದ ಸಣ್ಣ ಪಟ್ಟಣಗಳಲ್ಲಿ ರೈಲುಗಳ ನಿಲುಗಡೆ ರದ್ದುಗೊಳಿಸಲಾಗಿದೆ. ಇದರಿಂದ ಕೂಲಿ ಕಾರ್ವಿುಕರು, ವಿದ್ಯಾರ್ಥಿಗಳು ತೊಂದರೆಗೀಡಾಗಿದ್ದಾರೆ ಎಂದು ದೂರಿದರು.
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸ್ಟೇಷನ್ ಮಾಸ್ಟರ್ ಮೂಲಕ ರೈಲ್ವೆ ಸಚಿವರು ಹಾಗೂ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು. ರಮೇಶ ಹೊಸಮನಿ, ಹನಮೇಶ ಹುಡೇದ, ಮಹಾಂತೇಶ ಬೀಳೂರು, ಇಮ್ರಾನ್ ಖಾನ್, ರಹೀಮ್ ಖಾನ್ ಇತರರು ಪಾಲ್ಗೊಂಡಿದ್ದರು.