ಅನಧಿಕೃತ ಲೋಡ್‌ಶೆಡ್ಡಿಂಗ್‌ಗೆ ಆಕ್ರೋಶ: ಸೆಸ್ಕ್ ಕಚೇರಿ ಎದುರು ರೈತರ ಮುತ್ತಿಗೆ

Raytha Protest mandya
Published on

ಮಂಡ್ಯ: ಅನಧಿಕೃತ ಲೋಡ್‌ಶೆಡ್ಡಿಂಗ್ ಜಾರಿಗೊಳಿಸುವ ಮೂಲಕ ಕೃಷಿ ಪಂಪ್‌ಸೆಟ್‌ಗಳಿಗೆ ಸಮರ್ಪಕ ವಿದ್ಯುತ್ ಪೂರೈಸದ ಹಿನ್ನೆಲೆಯಲ್ಲಿ ನಗರದಲ್ಲಿ ಬುಧವಾರ ರೈತ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸೆಸ್ಕ್ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಎದುರು ಧರಣಿ ಕುಳಿತ ಪ್ರತಿಭಟನಾಕಾರರು, ರಾಜ್ಯಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಳೆ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ಈಗಾಗಲೇ ರೈತರ ಬದುಕು ಸಂಕಷ್ಟದಲ್ಲಿದೆ. ಈ ನಡುವೆ ರಾಜ್ಯಸರ್ಕಾರ ಅನಿಯಮಿತವಾಗಿ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ರಾತ್ರಿ ವೇಳೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಜಮೀನಿನತ್ತ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿಂದೆ ಪ್ರತಿನಿತ್ಯ ಏಳು ತಾಸು ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ, ಈಗ ಐದು ತಾಸಿಗೆ ಇಳಿಕೆ ಮಾಡಲಾಗಿದೆ. ಮಾತ್ರವಲ್ಲದೆ ಹಗಲು ಸರಬರಾಜು ಮಾಡುತ್ತಿದ್ದ ವಿದ್ಯುತ್ ಅನ್ನು ರಾತ್ರಿ ಪಾಳಿಗೆ ವರ್ಗಾಯಿಸಲಾಗಿದೆ. ಇದರಿಂದ ರೈತರಿಗೆ ಮತ್ತಷ್ಟು ತೊಂದರೆಯಾಗಿದೆ, ಪ್ರತಿನಿತ್ಯ ಎರಡು ತಾಸು ಕೂಡ ವಿದ್ಯುತ್ ನೀಡುತ್ತಿಲ್ಲ. ಬೆಳೆ ಉಳಿಸಿಕೊಳ್ಳಲು ಕೃಷಿ ಪಂಪ್‌ಸೆಟ್‌ಗೆ ಪ್ರತಿನಿತ್ಯ ಹತ್ತು ತಾಸು ತ್ರೀ ಫೇಸ್ ವಿದ್ಯುತ್ ಪೂರೈಕೆ ಮಾಡಬೇಕು. ಅದು ಕೂಡ ಹಗಲು ಹೊತ್ತು ಹೆಚ್ಚಿನ ವಿದ್ಯುತ್ ಸರಬರಾಜು ಮಾಡಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ರೈತ ಸಂಘದ ಶಿವಳ್ಳಿ ಚಂದ್ರು, ಜವರೇಗೌಡ, ಚಿಕ್ಕ ಮಂಡ್ಯ ನಾಗರಾಜು, ರಾಮಲಿಂಗೇಗೌಡ, ಸಣ್ಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net