ಪ್ಯಾನಿಕ್ ಬಟನ್, ಜಿಪಿಎಸ್ ಅಳವಡಿಕೆಗೆ ವಿರೋಧ: ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘ ಪ್ರತಿಭಟನೆ

11
Published on


ಮೈಸೂರು:
ಪ್ರವಾಸಿ ವಾಹನಗಳಿಗೆ ಅವೈಜ್ಞಾನಿಕವಾಗಿ ಪ್ಯಾನಿಕ್ ಬಟನ್, ಜಿಪಿಎಸ್ ಅಳವಡಿಕೆ ಖಂಡಿಸಿ ಮೈಸೂರು ಜಿಲ್ಲಾ ಪ್ರವಾಸಿ ವಾಹನ ಚಾಲಕರ ಮತ್ತು ಮಾಲೀಕರ ಕ್ಷೇಮಾಭಿವೃದ್ಧಿ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಯಿತು.

ನಗರದ ಬಲ್ಲಾಳ್ ವೃತ್ತದ ಬಳಿಯ ಆರ್‌ಟಿಒ ಕಚೇರಿ ಮುಂಭಾಗ ಜಮಾವಣೆಗೊಂಡ ಪ್ರತಿಭಟನಾಕಾರರು, ನಾನಾ ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕೆಲವರು ಹೊರ ರಾಜ್ಯದಲ್ಲಿ ವಾಹನಗಳನ್ನು ನೋಂದಣಿ ಮಾಡಿ ರಾಜ್ಯದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡುತ್ತಿದ್ದಾರೆ. ಜತೆಗೆ ರಾಜ್ಯದ ಬಸ್ ಮಾಲೀಕರ ಮೇಲೂ ದೌರ್ಜನ್ಯ ನಡೆಸಲಾಗುತ್ತಿದೆ. ಈ ಕೂಡಲೇ ಇದರ ಬಗ್ಗೆ ಕ್ರಮ ಕೈಗೊಂಡು ನ್ಯಾಯ ಕೊಡಿಸಬೇಕು. ಸರ್ಕಾರ ನಿಗದಿಪಡಿಸಿರುವ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್‌ನ ಹಣವನ್ನು ಸರ್ಕಾರವೇ ಭರಿಸಬೇಕು. ಪ್ರವಾಸಿ ವಾಹನಗಳ ತೆರಿಗೆ ಶೇ.30ರಷ್ಟು ಕಡಿತಗೊಳಿಸಬೇಕು ಎಂದು ಆಗ್ರಹಿಸಿದರು.

ವೈಟ್ ಬೋರ್ಡ್‌ನಲ್ಲಿ ಪ್ರವಾಸ ಹೋಗುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವೈಟ್ ಬೋರ್ಡ್ ಸೆಲ್ಫ್ ಡ್ರೈವ್ ವಾಹನಗಳು, ಆ್ಯಪ್ ಮೂಲಕ ಅಂತಾರಾಜ್ಯ ತೆರಿಗೆ ಕಳ್ಳರಿಗೆ ಕಠಿಣ ಶಿಕ್ಷೆ ನೀಡಬೇಕು. ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇನಲ್ಲಿ ದಂಡ ತೆಗೆಯಬೇಕು. ನಮ್ಮ ಪ್ರವಾಸಿ ವಾಹನಗಳು ಪಾವತಿಸಿರುವ ಶೇ.10ರಷ್ಟು ತೆರಿಗೆಯನ್ನು ನಮಗೆ ಹಿಂದಿರುಗಿಸಬೇಕು. ಹೊರ ರಾಜ್ಯದಿಂದ ನೋಂದಣಿ ಮಾಡಿಸಿ ರಾಜ್ಯದಲ್ಲಿ ಚಾಲನೆಯಲ್ಲಿರುವ ವಾಹನಗಳನ್ನು ಆರ್‌ಟಿಒ ಕೂಡಲೇ ವಶಪಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಮ್ಮ 250 ಬಸ್‌ಗಳನ್ನು ಆರ್‌ಟಿಒ ಕಚೇರಿ ಮುಂದೆ ನಿಲ್ಲಿಸಿ ವಾಹನದ ದಾಖಲೆ, ಕೀಯನ್ನು ಆಯುಕ್ತರಿಗೆ ನೀಡುತ್ತೇವೆ ಎಂದು ಎಚ್ಚರಿಸಿದರು.

ಈ ವೇಳೆ ಸ್ಥಳಕ್ಕೆ ಬಂದ ಮಾಜಿ ಸಂಸದ ಪ್ರತಾಪ್ ಸಿಂಹ ಪ್ರತಿಭಟನಾಕಾರರಿಗೆ ಬಂಬಲ ಸೂಚಿಸಿದರು. ಬಳಿಕ ಆರ್‌ಟಿಒ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು. ಸರ್ಕಾರ ಸೂಚಿಸಿರುವ 12 ಸಂಸ್ಥೆಗಳಿಂದಲೇ ಜಿಪಿಎಸ್ ಹಾಗೂ ಪ್ಯಾನಿಕ್ ಬಟನ್ ಖರೀದಿಗೆ ಸೂಚಿಸಿರುವ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಕೂಡಲೇ ಸಮಸ್ಯೆ ಬಗೆಹರಿಸುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಅರುಣ್ ಕುಮಾರ್, ಸಿ.ರವಿ, ಕೌಶಿಕ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net