

ಹಾಸನ: ಹಾಸನಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಆಹಾರ ಮತ್ತು ಕೃಷಿ ಮೇಳವನ್ನು ಸರ್ಕಾರಿ ವಿಜ್ಞಾನ ಕಾಲೇಜಿನ ಟರ್ಫ್ ಮೈದಾನದಲ್ಲಿ ನಡೆಸುತ್ತಿರುವುದಕ್ಕೆ ಕ್ರೀಡಾಭಿಮಾನಿಗಳು ಸಮಾಧಾನ ವ್ಯಕ್ತಪಡಿಸಿದ್ದಾರೆ.
ನಗರದ ಪ್ರಮುಖ ಕ್ರೀಡಾಂಗಣದಲ್ಲಿ ನೂರಾರು ಟೆಂಟ್‌ಗಳನ್ನು ಅಳವಡಿಸಿ ಆಹಾರ ಹಾಗೂ ಕೃಷಿ ಮೇಳ ನಡೆಸುವುದರಿಂದ ಟರ್ಫ್ ಮೈದಾನದ ನೆಲಹಾಸು ಹಾನಿಗೊಳಗಾಗುತ್ತದೆ ಎಂದು ದೂರಿದ್ದಾರೆ.
ಹಾಸನ ಜಿಲ್ಲಾ ಕ್ರೀಡಾ ಅಸೋಸಿಯೇಷನ್ ನಿರ್ದೇಶಕ ಸಂಗಮ್ ಸುದ್ದಿಗಾರರೊಂದಿಗೆ ಮಾತನಾಡಿ, ಟರ್ಫ್ ಮೈದಾನದಲ್ಲಿ ಟೆಂಟ್ ಹಾಕುವುದರಿಂದ ಮೈದಾನಕ್ಕೆ ಹಾನಿಯಾಗುತ್ತದೆ. ಈ ಬಗ್ಗೆ ಜಿಲ್ಲಾಡಳಿತದ ಗಮನಕ್ಕೂ ತರಲಾಗಿದೆ. ಆದರೂ ಪ್ರಯೋಜನವಾಗಿಲ್ಲ ಎಂದರು.
ಅಂತಾರಾಷ್ಟ್ರೀಯ ಕ್ರಿಕೆಟಿಗರಾದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಜೋಶಿ, ರಾಹುಲ್ ದ್ರಾವಿಡ್ ಇತರರು ಕ್ರೀಡಾಂಗಣ ಉದ್ಘಾಟಿಸಿದ್ದಾರೆ. ಅನೇಕರ ಶ್ರಮದಿಂದ ಕ್ರೀಡಾಂಗಣ ಅಭಿವೃದ್ಧಿಪಡಿಸಲಾಗಿದೆ. ಕ್ರೀಡಾಂಗಣವನ್ನು ಏಕಾಏಕಿ ಹಾಳು ಮಾಡುವುದು ಸರಿಯಲ್ಲ ಎಂದು ಹೇಳಿದರು.
ತರಬೇತುದಾರ ಆಕಾಶ್ ಮಾತನಾಡಿ, ಟರ್ಫ್ ಮೈದಾನ ಕಾಪಾಡಿಕೊಳ್ಳುವುದು ಕಷ್ಟದ ಕೆಲಸ ಏಕಾಏಕಿ ಭಾರಿ ವಾಹನಗಳನ್ನು ತಂದು ಟೆಂಟ್ ನಿರ್ಮಾಣ ಮಾಡುವುದು ಸರಿಯಲ್ಲ. ಅಲ್ಲದೆ ಮತ್ತೆ ನಿರ್ವಹಣೆ ಮಾಡಲು ತಿಂಗಳು ಗಟ್ಟಲೆ ಸಮಯ ಹಾಗೂ ಸಾಕಷ್ಟು ಹಣ ಖರ್ಚಾಗುತ್ತದೆ ಎಂದರು.