ಬಳ್ಳಾರಿ : ಜಿಲ್ಲೆಯಲ್ಲಿರುವ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯನ್ನು ಕಲಬುರಗಿಗೆ ಸ್ಥಳಾಂತರ ಮಾಡುವ ಪ್ರಯತ್ನವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ಇಲ್ಲಿನ ಡಿಸಿ ಕಚೇರಿ ಆವರಣದಲ್ಲಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ನಡೆಯಿತು.
ಬಿಡಿಸಿಸಿ ಅಧ್ಯಕ್ಷ ಯಶವಂತರಾಜ್ ನಾಗಿರೆಡ್ಡಿ ಮಾತನಾಡಿ, ಜವಳಿ ಮತ್ತು ಕೈಮಗ್ಗ ಜಂಟಿ ನಿರ್ದೇಶಕರ ಕಚೇರಿಯನ್ನು ಕಲಬುರಗಿಗೆ ಸ್ಥಳಾಂತರಿಸುವುದರಿಂದ ಆಡಳಿತಾತ್ಮಕ ಹಾಗೂ ತಾಂತ್ರಿಕವಾಗಿ ಸಾಕಷ್ಟು ಸಮಸ್ಯೆಗಳಾಗುತ್ತವೆ. ಬಳ್ಳಾರಿಯ ರೆಡಿಮೇಡ್ ಗಾರ್ಮೆಂಟ್ ಉದ್ಯಮವು ನಿರುತ್ಸಾಹಗೊಳ್ಳಲಿದೆ. ಬಳ್ಳಾರಿಯ ಅಭಿವೃದ್ಧಿ, ಉದ್ಯಮಿಗಳ, ಕಾರ್ಮಿಕರ ಮತ್ತು ಹೂಡಿಕೆದಾರರ ಭವಿಷ್ಯ ಮಸುಕಾಗಲಿದೆ. ಗಾರ್ಮೆಂಟ್ ಉದ್ಯಮಕ್ಕೆ ಪೂರಕವಾದ ಯಾವುದೇ ಕೈಗಾರಿಕಾ ಘಟಕಗಳು ಮತ್ತು ರೆಡಿಮೇಡ್ ಗಾರ್ಮೆಂಟ್ ಉದ್ಯಮಗಳು ಇಲ್ಲದೇ ಇರುವ ಕಲಬುರಗಿಗೆ ಈ ಕಚೇರಿಯನ್ನು ಬಳ್ಳಾರಿಯಲ್ಲಿಯೇ ಮುಂದುವರೆಸಬೇಕು. ಸರ್ಕಾರ ಕಲಬುರಗಿಯಲ್ಲಿ ಜವಳಿ ಮತ್ತು ಕೈಮಗ್ಗ ಜಂಟಿ ನಿರ್ದೇಶಕರ ಪ್ರತ್ಯೇಕ ಕಚೇರಿಯನ್ನು ತೆರೆಯಲಿ ಎಂದು ಹೇಳಿದರು.
ಸಾಮಾಜಿಕ ಹೋರಾಟಗಾರ ಸಿರಿಗೇರಿ ಪನ್ನರಾಜ್ ಮಾತನಾಡಿ, ಬ್ರಿಟೀಷರ ಕಾಲದ ಆಡಳಿತದಿಂದಲೂ ಜಿಲ್ಲೆ ಹಾಗೂ ನೆರೆಯ ಆಂಧ್ರದ ಗಡಿ ಗ್ರಾಮಗಳಲ್ಲಿ ಸಿದ್ದ ಉಡುಪು ಉದ್ಯಮ ಗೃಹ ಉದ್ಯಮವಾಗಿದೆ. ಪ್ರಸ್ತುತ ಬಳ್ಳಾರಿಯಲ್ಲಿ 1,500 ರಿಂದ 2,000 ಗಾರ್ಮೆಂಟ್ ತಯಾರಿಕಾ ಘಟಕಗಳಿವೆ. ಜೀನ್ಸ್ ಗಾರ್ಮೆಂಟ್, ಜೀನ್ಸ್ ವಾಷಿಂಗ್ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ನಗರದಲ್ಲಿಯೇ 50,000 ಕ್ಕೂ ಹೆಚ್ಚು ನೇರ ಮತ್ತು ಪರೋಕ್ಷ ಉದ್ಯೋಗಿಗಳಿದ್ದಾರೆ. ಪ್ರತಿ ವರ್ಷ 2,000 ಕೋಟಿ ರೂ. ವ್ಯವಹಾರ ನಡೆಯುತ್ತಿದೆ. ಈ ಕಚೇರಿ ಕಲಬುರಗಿಗೆ ಸ್ಥಳಾಂತರವಾದಲ್ಲಿ ಸಾರ್ವಜನಿಕರ ಸಹಕಾರದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.
ನಗರದ ಗಾಂಧಿಭವನದಿಂದ ಪ್ರಾರಂಭವಾದ ಪ್ರತಿಭಟನೆಯು ಡಿಸಿ ಕಚೇರಿಯವರೆಗೆ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.