ತುಟ್ಟಿಭತ್ಯೆ ತಡೆಗೆ ವಿರೋಧ

DSC_8190
Published on

ಮೈಸೂರು: ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗುತ್ತಿಗೆ ಪೌರ ಕಾರ್ಮಿಕರ ಗಳಿಕೆ ರಜೆ ನಗದೀಕರಣ ಮತ್ತು ತುಟ್ಟಿಭತ್ಯೆ ಹೆಚ್ಚಳ ತಡೆ ಹಿಡಿದಿರುವುದು ಹಾಗೂ ಕೇಂದ್ರ ಸರ್ಕಾರ ಪ್ರಮುಖ ಕಾರ್ಮಿಕ ಕಾಯ್ದೆಗಳನ್ನು ಸುಗ್ರೀವಾಜ್ಞೆ ಮೂಲಕ ರದ್ದುಪಡಿಸಿರುವುದು ಸರಿಯಲ್ಲ ಎಂದು ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಅಸಮಾಧಾನ ವ್ಯಕ್ತಪಡಿಸಿದರು.

ಪೌರ ಕಾರ್ಮಿಕರು ತಮ್ಮ ಆರೋಗ್ಯ ಮತ್ತು ಜೀವವನ್ನು ಲೆಕ್ಕಿಸದೆ ಕರೊನಾ ಭಯದ ನಡುವೆಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸೇವೆ ಗುರುತಿಸಿ ಸರ್ಕಾರ ಪ್ರೋತ್ಸಾಹಧನವನ್ನು ಸಹ ನೀಡಿಲ್ಲ. ಇದರ ನಡುವೆ ಕಾಯಂ ಪೌರ ಕಾರ್ಮಿಕರಿಗೆ 2 ವರ್ಷಕ್ಕೊಮ್ಮೆ ನ್ಯಾಯಬದ್ಧವಾಗಿ ನೀಡಬೇಕಾದ ಗಳಿಕೆ ರಜೆ ನಗದೀಕರಣ, ಗುತ್ತಿಗೆ ಪೌರ ಕಾರ್ಮಿಕರ 480 ರೂ. ತುಟ್ಟಿಭತ್ಯೆ ತಡೆ ಹಿಡಿಯುವ ತೀರ್ಮಾನ ಖಂಡನೀಯ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರ ತಡೆ ಹಿಡಿದಿರುವ ಗಳಿಕೆ ರಜೆ ನಗದೀಕರಣ, ತುಟ್ಟಿಭತ್ಯೆಯನ್ನು ಕೂಡಲೇ ಪಡೆಯಲು ಅವಕಾಶ ಮಾಡಿಕೊಡಬೇಕು. ಪೌರ ಕಾರ್ಮಿಕರನ್ನು ಅಧಿಕೃತವಾಗಿ ಕರೊನಾ ವಾರಿಯರ್ಸ್ ಎಂದು ಘೋಷಿಸಬೇಕು. ಗುತ್ತಿಗೆ ಪೌರ ಕಾರ್ಮಿಕರಿಗೆ ಮಾಸಿಕ 23 ಸಾವಿರ ರೂ. ನೀಡಬೇಕೆಂದು ಒತ್ತಾಯಿಸಿದರು.

ಕೇಂದ್ರ ಸರ್ಕಾರ ಕರೊನಾ ಲಾಕ್‌ಡೌನ್ ಸಂದರ್ಭವನ್ನು ಬಳಕೆ ಮಾಡಿಕೊಂಡು 45 ಪ್ರಮುಖ ಕಾರ್ಮಿಕ ಕಾಯ್ದೆಗಳನ್ನು ರದ್ದು ಮಾಡಿ ಕೇವಲ ನಾಲ್ಕು ಕಾಯ್ದೆಗಳಿಗೆ ಸೀಮಿತಗೊಳಿಸಿ ಸುಗ್ರೀವಾಜ್ಞೆ ಹೊರಡಿಸಿದೆ. ಈ ಕಾಯ್ದೆಯು ಕಾರ್ಮಿಕರ ಹಕ್ಕುಗಳಿಗೆ, ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತದೆ. ಬಂಡವಾಳಶಾಹಿಗಳು, ಬಹುರಾಷ್ಟ್ರೀಯ ಕಂಪನಿಗಳಿಗೆ ಪೂರಕವಾಗಿ ಕಾಯ್ದೆಯನ್ನು ತಿದ್ದುಪಡಿ ಮಾಡಲಾಗಿದೆ. ಸರ್ಕಾರ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಬಡವರ ಬದುಕನ್ನು ಬೀದಿಪಾಲು ಮಾಡಿದೆ ಎಂದು ಆರೋಪಿಸಿದರು.

ಹೊಸ ಕಾಯ್ದೆ ಪ್ರಕಾರ 8 ಗಂಟೆಯ ಬದಲು 12 ಗಂಟೆ ದುಡಿಯಬೇಕು, ಇದರಿಂದ 8 ಗಂಟೆ ದುಡಿಮೆ, 8 ಗಂಟೆ ವಿಶ್ರಾಂತಿ, 8 ಗಂಟೆ ಮನರಂಜನೆ ಎಂಬ ದಿನದ 24 ಗಂಟೆಗಳ ಪರಿಕಲ್ಪನೆಗೆ ಧಕ್ಕೆಯಾಗಲಿದೆ. ಮಾಲೀಕರು ಕೊಟ್ಟಷ್ಟು ವೇತನ ಪಡೆದುಕೊಂಡು ಕಾರ್ಮಿಕರು ದುಡಿಯಬೇಕಾಗುತ್ತದೆ.
ಪ್ರಸ್ತುತ ಕನಿಷ್ಠ ವೇತನ ನಿಗದಿಗಾಗಿ ಸರ್ಕಾರಕ್ಕೆ ಇರುವ ಅಧಿಕಾರ ಮಾಲೀಕರ ಕೈಗೆ ಹಸ್ತಾಂತರವಾಗಲಿದೆ. ಮಹಿಳಾ ಮತ್ತು ಪುರುಷ ಕಾರ್ಮಿಕರ ನಡುವೆ ವೇತನ ತಾರತಮ್ಯ ಉಂಟಾಗುತ್ತದೆ.

ಕಾರ್ಮಿಕ ಸಂಘಟನೆಗಳನ್ನು ಕಟ್ಟುವ ಹಾಗೆ ಮಾಲೀಕರೊಂದಿಗೆ ರಾಜಿ ಸಂಧಾನ ಮಾಡುವುದಕ್ಕೆ ಅವಕಾಶ ಇರುವುದಿಲ್ಲ. ಈ ರೀತಿ ಕಾರ್ಮಿಕರು ಹಲವು ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ ಕೇಂದ್ರ ಸರ್ಕಾರ ಕೂಡಲೇ ಆದೇಶ ಹಿಂಪಡೆಯದೆ ಇದ್ದರೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net