ರಾಷ್ಟ್ರೀಕೃತ ಬ್ಯಾಂಕ್ ಖಾಸಗೀಕರಣಕ್ಕೆ ವಿರೋಧ

15-gdg-4
Published on

ಗದಗ: ರಾಷ್ಟ್ರೀಕೃತ ಬ್ಯಾಂಕ್​ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಸೋಮವಾರ ಜಿಲ್ಲೆಯಲ್ಲಿ ಬ್ಯಾಂಕ್ ನೌಕರರ ಸಂಘದ ವತಿಯಿಂದ ಪ್ರತಿಭಟನೆ ನಡೆಯಿತು.

ರಾಷ್ಟ್ರಮಟ್ಟದಲ್ಲಿ ಬ್ಯಾಂಕ್ ನೌಕರರ ಒಕ್ಕೂಟ ಕರೆ ನೀಡಿರುವ ಮಾ.15 ಮತ್ತು ಮಾ. 16 ಎರಡು ದಿನಗಳ ಬ್ಯಾಂಕ್ ಮುಷ್ಕರಕ್ಕೆ ವ್ಯಾಪಕ ಜಿಲ್ಲೆಯಲ್ಲಿ ಬೆಂಬಲ ವ್ಯಕ್ತವಾಯಿತು.

ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿ ಸೇವೆ ಸ್ಥಗಿತಗೊಳಿಸಿ ನಗರದ ಮಹಾತ್ಮ ಗಾಂಧಿ ವೃತ್ತದ ಬಳಿ ಇರುವ ಕೆನರಾ ಬ್ಯಾಂಕ್ ಎದುರು ಬ್ಯಾಂಕ್ ನೌಕರರು ಪ್ರತಿಭಟನೆ ನಡೆಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹನುಮೇಶ ಗಂಗರಾಹುತರ ಮಾತನಾಡಿ, ‘ದೇಶದ ಆರ್ಥಿಕ ಅಭಿವೃದ್ಧಿಗೆ ಬ್ಯಾಂಕ್​ಗಳ ಪಾತ್ರ ಅಗ್ರಗಣ್ಯ. ಸಾರ್ವಜನಿಕರು ಠೇವಣಿ ಸೇರಿ ಹಲವಾರು ರೀತಿಯಲ್ಲಿ ಬ್ಯಾಂಕ್​ನೊಂದಿಗೆ ವ್ಯವಹಾರ ಮಾಡುತ್ತಾರೆ. ಬ್ಯಾಂಕ್​ಗಳು ಸರ್ಕಾರದ ಅಧೀನದಲ್ಲಿವೆ ಎಂಬ ಕಾರಣದಿಂದ ಜನರು ಧೈರ್ಯದಿಂದ ವ್ಯವಹರಿಸುತ್ತಾರೆ. ಆದರೆ, ಕೇಂದ್ರ ಸರ್ಕಾರ ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡಹೊರಟಿರುವುದು ಜನವಿರೋಧಿ ಕೆಲಸ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ದೇಶದ ಸಾರ್ವಜನಿಕರ ಸ್ವತ್ತು ಬಂಡವಾಳಶಾಹಿಗಳ ಆಸ್ತಿಯಲ್ಲ. ಹೀಗಾಗಿ, ಕೂಡಲೇ ಬ್ಯಾಂಕ್​ಗಳ ಖಾಸಗೀಕರಣ ಕ್ರಮವನ್ನು ಕೈಬಿಡಬೇಕೆಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಯಚ್ಚರಸ್ವಾಮಿ ನಾಯ್ಕ ಮಾತನಾಡಿ, ಕೇಂದ್ರ ಸರ್ಕಾರ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಲು ಹೊರಟಿರುವುದು ಸಾರ್ವಜನಿಕರಿಗೆ ಆತಂಕ ಮತ್ತು ಅಭದ್ರತೆ ಕಾಡತೊಡಗಿದೆ. ಖಾಸಗೀಕರಣದಿಂದ ಸೇವಾಭದ್ರತೆ ಇಲ್ಲದಿರುವುದರಿಂದ ಯಾವುದೇ ಸಮಯದಲ್ಲಾದರೂ ಕೆಲಸದಿಂದ ತೆಗೆದ ಹಾಕಬಹುದು ಎಂದು ಬ್ಯಾಂಕ್ ನೌಕರರು ಚಿಂತಿಸುತ್ತಿದ್ದಾರೆ. ಆದ್ದರಿಂದ ನೌಕರರ ಹಿತದೃಷ್ಟಿ ಮತ್ತು ಸಾರ್ವರ್ನಿಕರ ಹಣದ ಸುರಕ್ಷತೆ ಗಮನದಲ್ಲಿಟ್ಟುಕೊಂಡು ಬ್ಯಾಂಕ್​ಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಾಗೇಂದ್ರ, ಅಶೋಕ ಗೌಡರ, ಹರೀಶ ಬಾಗಲಕೋಟಿ, ಅಮರೇಶ್ವರ ಪುಂಡಲೀಕ, ಮಂಜುನಾಥ ದೊಡ್ಡಮನಿ, ಸಿದ್ದು, ನರಸಿಂಹ, ರಾಜು, ದೀಪಿಕಾ, ಶಬಾನಾ, ಗಾಯತ್ರಿ, ಭಾಗ್ಯಶ್ರೀ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net