

ಮೈಸೂರು: ಗಿರಿಜನ ಆಶ್ರಮ ಶಾಲೆಯ ಹೆಸರನ್ನು ರಾಜ್ಯ ಸರ್ಕಾರ ‘ವಾಲ್ಮೀಕಿ ಶಾಲೆ’ ಎಂದು ಬದಲಾಯಿಸಿರುವುದು ಸರಿಯಲ್ಲ ಎಂದು ಗಿರಿಜನ ಸಂರಕ್ಷಣಾ ಸಮಿತಿ ಕಾರ್ಯದರ್ಶಿ ವಿಠಲ ಅಸಮಾಧಾನ ವ್ಯಕ್ತಪಡಿಸಿದರು.
ವಾಲ್ಮೀಕಿ ಅವರ ಬಗ್ಗೆ ನಮಗೆ ಗೌರವ ಇದೆ. ಆದರೆ, ಅವರ ಹೆಸರನ್ನು ಬೇರೆ ಶಾಲೆಗಳಿಗೆ ಇಡುವುದು ಉತ್ತಮ. ಗಿರಿಜನ ಆಶ್ರಮ ಶಾಲೆ ಹೆಸರನ್ನು ‘ವಾಲ್ಮೀಕಿ ಶಾಲೆ’ ಎಂದು ಬದಲಾವಣೆ ಮಾಡಿರುವ ಹಿನ್ನೆಲೆಯಲ್ಲಿ ಆ ಶಾಲೆ ನಮ್ಮದಲ್ಲ ಎಂಬ ಭಾವನೆ ಮೂಡುತ್ತಿದೆ. ಹಾಗಾಗಿ ಸರ್ಕಾರ ಸ್ವಾತಂತ್ರೃ ಚಳವಳಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಆದಿವಾಸಿ ಮುಖಂಡ ಬಿರ್ಸಾ ಮುಂಡಾ ಅವರ ಹೆಸರನ್ನು ಶಾಲೆ ಇಡಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಗಿರಿಜನ ಆಶ್ರಮ ಶಾಲೆಗೆ ಇಟ್ಟಿರುವ ವಾಲ್ಮೀಕಿ ಶಾಲೆ ಹೆಸರನ್ನು ಬದಲಾಯಿಸಿ ಬಿರ್ಸಾ ಮುಂಡಾ ಅವರ ಹೆಸರು ಇಡುವಂತೆ ಜಿಲ್ಲಾಡಳಿತ ಹಾಗೂ ಸರ್ಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಲಾಗಿದ್ದು, ಸರ್ಕಾರ ಇದುವರೆಗೆ ನಮ್ಮ ಮನವಿಗೆ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಆದಿವಾಸಿಗಳು ಇಂದಿಗೂ ಅರಣ್ಯದಲ್ಲಿ ಹಾಗೂ ಪುನರ್ವಸತಿ ಕೇಂದ್ರಗಳಲ್ಲಿ ಸಂಕಷ್ಟದ ಬದುಕನ್ನು ನಡೆಸುತ್ತಿದ್ದಾರೆ. ಸರ್ಕಾರ ನಮ್ಮ ಸಂಕಷ್ಟಗಳಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಮಾರ, ರತ್ನಮ್ಮ, ಕಾಳಪ್ಪ, ಲಕ್ಷ್ಮಿ ಇದ್ದರು.