ಮಿಶ್ರ ವೈದ್ಯಕೀಯ ಪದ್ಧತಿಗೆ ವಿರೋಧ

11-gdg-4
Published on

ಗದಗ: ಕೇಂದ್ರ ಸರ್ಕಾರ ಆಯುರ್ವೆದ ವೈದ್ಯರಿಗೆ ಕೆಲವು ಶಸ್ತ್ರಚಿಕಿತ್ಸೆ ಮಾಡಲು ಅವಕಾಶ ಕಲ್ಪಿಸಿರುವುದನ್ನು ವಿರೋಧಿಸಿ ಶುಕ್ರವಾರ ಖಾಸಗಿ ಅಲೋಪಥಿ ಆಸ್ಪತ್ರೆಗಳು ತಮ್ಮ ಹೊರರೋಗಿಗಳ ತಪಾಸಣೆ ಸೇವೆ (ಒಪಿಡಿ) ಬಂದ್ ಮಾಡಿದ್ದರಿಂದ ರೋಗಿಗಳು ತೊಂದರೆ ಅನುಭವಿಸಿದರು.

ಡಿ. 11ರಂದು ಒಪಿಡಿ ಬಂದ್ ಮಾಡಲಾಗುವುದು ಎಂದು ಖಾಸಗಿ ವೈದ್ಯರು ಮುಂಚಿತವಾಗಿ ನಿರ್ಧರಿಸಿ ಸಾರ್ವಜನಿಕರಿಗೆ ತಿಳಿಸಿದ್ದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಕಡಿಮೆ ಇತ್ತು. ತುರ್ತು ಚಿಕಿತ್ಸೆ, ಔಷಧ ಅಂಗಡಿ, ಒಳರೋಗಿಗಳ ಸೇವೆ ನಿರಾತಂಕವಾಗಿ ನಡೆಯಿತು. ಆಸ್ಪತ್ರೆ ಬಂದ್ ಇದ್ದುದರಿಂದ ಅನೇಕ ರೋಗಿಗಳು ದೂರವಾಣಿ ಮೂಲಕ ವೈದ್ಯರನ್ನು ಸಂರ್ಪಸಿ ಸಲಹೆ ಸೂಚನೆ ಪಡೆದುಕೊಂಡರು ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದರು.

ಗದಗ-ಬೆಟಗೇರಿ ಅವಳಿನಗರದಲ್ಲಿರುವ ಖಾಸಗಿ ಅಲೋಪಥಿ ಆಸ್ಪತ್ರೆಗಳು ಸೇವೆಯನ್ನು ಬಂದ್ ಮಾಡಿದ್ದವು. ಆಸ್ಪತ್ರೆಯ ಮುಂಭಾಗದಲ್ಲಿ ‘ಶುಕ್ರವಾರ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ಒಪಿಡಿ ಬಂದ್ ಮಾಡಲಾಗಿದೆ’ ಎಂಬ ಫಲಕವನ್ನು ನೇತು ಹಾಕಲಾಗಿತ್ತು.

ಕೇಂದ್ರ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ಮಿಶ್ರ ವೈದ್ಯಕೀಯ ಪದ್ಧತಿಯು ಮಾನವ ಹಕ್ಕುಗಳ ಉಲ್ಲಂಘನೆ ಆಗಲಿದ್ದು, ಹೈಬ್ರೀಡ್ ವೈದ್ಯರನ್ನು ನಿರ್ವಿುಸುವ ನೀತಿಯನ್ನು ಕೈ ಬಿಡಬೇಕೆಂದು ಒತ್ತಾಯಿಸಿ ಐಎಂಎ ಗದಗ ವತಿಯಿಂದ ಖಾಸಗಿ ಅಲೋಪಥಿ ವೈದ್ಯರು ಈಗಾಗಲೇ ಜಿಲ್ಲಾಧಿಕಾರಿ ಸುಂದರೇಶಬಾಬು ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮಿಶ್ರ ವೈದ್ಯಕೀಯ ಪದ್ಧತಿ ಖಂಡಿತ ಬೇಡ. ವಿವಿಧ ವೈದ್ಯ ಪದ್ಧತಿಗಳ ಶುದ್ಧಿಯೇ ಐಎಂಎ ಗುರಿಯಾಗಿದೆ. ಪ್ರತಿಯೊಂದು ವೈದ್ಯ ಪದ್ಧತಿಯ ವೈದ್ಯರು ಬೇರೆ ಬೇರೆಯಾಗಿ ಗುರುತಿಸಲ್ಪಡಬೇಕು.|ಡಾ.ಪ್ರಕಾಶ ಧರಣಾ, ಗದಗ ಐಎಂಎ ಅಧ್ಯಕ್ಷ

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net