

ಮೈಸೂರು: ಮಹಿಷ ದಸರಾ ಆಚರಣಾ ಸಮಿತಿಯವರು ಮಹಿಷ ದಸರಾ ಆಚರಿಸುವುದಕ್ಕೆ ಅಡ್ಡಿಯಿಲ್ಲ. ಆದರೆ ಚಾಮುಂಡಿಬೆಟ್ಟದಲ್ಲಿನ ಮಹಿಷ ಮೂರ್ತಿ ಎದುರು ಆಚರಿಸಿದಲ್ಲಿ ಅಲ್ಲಿ ರಾಷ್ಟ್ರೀಯ ಹಿಂದು ಸಮಿತಿ ಪ್ರತಿಭಟಿಸಿ ವಿರೋಧಿಸಲಿದೆ ಎಂದು ಸಮಿತಿಯ ಅಧ್ಯಕ್ಷ ವಿಕಾಸ್ ಶಾಸ್ತ್ರಿ ಎಚ್ಚರಿಸಿದರು.
ಹಲವಾರು ದಿನಗಳಿಂದ ಮಹಿಷ ದಸರಾ ಆಚರಣೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮಹಿಷ ದಸರಾ ಆಚರಣೆ ವೇಳೆ ಚಾಮುಂಡೇಶ್ವರಿಯನ್ನು ಕೆಟ್ಟ ಪದಗಳಿಂದ ನಿಂದಿಸುವುದು ನಡೆದಿದೆ. ಮಹಿಷ ಒಬ್ಬ ಬೌದ್ಧ, ಆತನಿಗೂ ಚಾಮುಂಡೇಶ್ವರಿಗೂ ಭೇಟಿಯೇ ಆಗಿಲ್ಲ ಎನ್ನುತ್ತಾರೆ. ಈ ರೀತಿ ಧರ್ಮ ಧರ್ಮದ ನಡುವೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಬೇಸರ ವ್ಯಕ್ತಪಡಿಸಿದರು.
ನಾವು ಬುದ್ಧನನ್ನು ವಿರೋಧಿಸುತ್ತಿಲ್ಲ. ದಶಾವತಾರದಲ್ಲಿ ಬುದ್ಧನೂ ಒಬ್ಬನಾಗಿದ್ದಾನೆ. ಮಹಿಷನಿಂದಲೇ ಮೈಸೂರಿಗೆ ಆ ಹೆಸರು ಬಂತು ಎನ್ನುವುದು ಸರಿಯಲ್ಲ. ಇಲ್ಲಿ ಎಮ್ಮೆಗಳು ಹೆಚ್ಚಾಗಿದ್ದರಿಂದಾಗಿ ಮಹಿಷೂರು ಎಂಬ ಹೆಸರು ಬಂದಿದೆ ಎಂದು ವಾದಿಸಿದರು.
ಜತೆಗೆ, ಸರ್ಕಾರ ಸಹ ಕಾನೂನು ಸುವ್ಯವಸ್ಥೆಗೆ ಅಡ್ಡಿಯುಂಟು ಮಾಡುವ ಮಹಿಷ ದಸರಾ ಆಚರಣೆಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿದರು. ಪದಾಧಿಕಾರಿಗಳಾದ ಪ್ರದೀಪ್, ಗಗನ್ ಇದ್ದರು.