

ಮಂಡ್ಯ: ಕರ್ನಾಟಕ ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮ ಸರಿಯಲ್ಲ ಎಂದು ಆರೋಪಿಸಿ ಪ್ರಾಂತ ಕೃಷಿ ಕೂಲಿಕಾರರ ಸಂಘ ಮತ್ತು ಪ್ರಾಂತ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಹೊಸಹಳ್ಳಿ ವೃತ್ತದಲ್ಲಿ ಜಮಾಯಿಸಿದ ಕಾರ್ಯಕರ್ತರು ಕಾಯ್ದೆಯ ಪ್ರತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೃಷಿಯನ್ನು ನಾಶ ಮಾಡಿ ಕಾರ್ಪೊರೇಟ್ ಕೃಷಿಯನ್ನು ಉತ್ತೇಜಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಮಾದರಿ ಕೃಷಿ ಗುತ್ತಿಗೆ ಕಾನೂನು-2016 ಅನ್ನು ಅಂಗೀಕರಿಸಿದೆ.
ಅಂತೆಯೇ, ಇದೇ ಮಾದರಿಯಲ್ಲಿ ರಾಜ್ಯಗಳಲ್ಲೂ ಕಾನೂನು ತರಲು ಒತ್ತಡ ಹೇರುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೂಡ ಅಧಿವೇಶನದಲ್ಲಿ ಜಾರಿಗೆ ತರುವುದಾಗಿ ದಾವೋಸ್‌ನಲ್ಲಿ ಆಯೋಜಿಸಿದ್ದ ಬಂಡವಾಳ ಹೂಡಿಕೆದಾರರ ಸಭೆಯಲ್ಲಿ ಒಪ್ಪಿಕೊಂಡಿರುವುದು ರೈತ ಸಮುದಾಯಕ್ಕೆ ಎಸಗಿದ ದ್ರೋಹ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಎಂ.ಪುಟ್ಟಮಾದು, ಬಿ.ಹನುಮೇಶ್, ಟಿ.ಎಲ್.ಕೃಷ್ಣೇಗೌಡ, ಎಲ್.ಸುರೇಂದ್ರ, ಕೆ.ಬಸವರಾಜು, ಶುಭಾವತಿ, ಎನ್.ಶಂಕರಪ್ಪ, ಅನಸೂಯ, ರಾಜು, ಶಾಂತಮ್ಮ ಇತರರಿದ್ದರು.