ನೀರು ಬಳಕೆ ಶುಲ್ಕ ಹೆಚ್ಚಳಕ್ಕೆ ವಿರೋಧ

ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ಎ.ರಮೇಶ್ ಅವರಿಗೆ ನಗರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ ದೂರು ನೀಡಿದರು.
ಕೊಳ್ಳೇಗಾಲ ನಗರಸಭೆ ಪೌರಾಯುಕ್ತ ಎ.ರಮೇಶ್ ಅವರಿಗೆ ನಗರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ ದೂರು ನೀಡಿದರು.
Published on

 ಕೊಳ್ಳೇಗಾಲ: ನಗರಸಭೆ ಕೊಳ್ಳೇಗಾಲ 24*7 ನೀರಿನ ದರದ ಮೀಟರ್ ಶುಲ್ಕವು ನಾಗರಿಕರಿಗೆ ಹೊರೆಯಾಗಿದೆ. ಹಾಗಾಗಿ ಹಿಂದಿನಂತೆ ಪ್ರತಿ ತಿಂಗಳಿಗೆ 120 ರೂ.ಯನ್ನು 15 ದಿನಗಳ ಒಳಗೆ ನಿಗದಿಪಡಿಸಬೇಕು. ಇಲ್ಲದಿದ್ದರೆ ನಗರಸಭೆ ಮುಂಭಾಗ ಪ್ರತಿಭಟಿಸುವುದಾಗಿ ನಗರಸಭೆ ನಾಮನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ ಪೌರಾಯುಕ್ತ ಎ.ರಮೇಶ್‌ಗೆ ಬುಧವಾರ ಲಿಖಿತ ದೂರು ಸಲ್ಲಿಸಿದರು.

ಕೊಳ್ಳೇಗಾಲ ನಗರಸಭಾ-ವ್ಯಾಪ್ತಿಯ 24*7 ನೀರಿನ ಸಂಪರ್ಕ ಹೊಂದಿರುವ ನಾಗರಿಕರಿಗೆ ಕಳೆದ ಮೂರು ತಿಂಗಳ ನೀರಿನ ಬಿಲ್ ಸಾವಿರಾರು ರೂಪಾಯಿ ಬಂದಿದೆ. ದೇವಾಂಗ ಪೇಟೆಯ ಶ್ರೀ ಮುನೇಶ್ವರ ಗುಡಿ ಬೀದಿಯ ರಾಜಮ್ಮ ಅವರಿಗೆ ನೀರಿನ ಶುಲ್ಕ 11,912 ರೂ. ಬಂದಿದೆ. ಪರಶಿವ 7,000, ನಂಜುಂಡಸ್ವಾಮಿ 5514, ತೊಳಸಮ್ಮ 5802, ರಾಜು 1750, ಸಾಗರ್ 5559, ಶ್ರೀನಿವಾಸ 3098, ಮಹೇಶ 3601, ರಂಗಸ್ವಾಮಿ 1499, ಗೋಪಾಲಪ್ಪ 19,623, ಪರಮೇಶ್ವರ 6127, ಕೃಷ್ಣಸ್ವಾಮಿ ಅವರಿಗೆ 7518 ರೂ. ಬಂದಿದೆ. ಇದರಿಂದ ನೀರಿನ ಬಳಕೆ ಶುಲ್ಕವು ನಾಗರಿಕರಿಗೆ ಹೊರೆಯಾಗಿದೆ. ಅಲ್ಲದೆ ಹಲವು ನಾಗರಿಕರಿಗೆ ಬಿಲ್ ಮೊತ್ತ ನೋಡಿ ಆತಂಕವಾಗಿದೆ ಎಂದು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಈ ನೀರಿನ ದರ ನಿಗದಿ ಮಾಡುವ ಸಂದರ್ಭದಲ್ಲಿ ಕರ್ನಾಟಕ ಮುನಿಸಿಪಾಲಿಟಿ ಅಧಿನಿಯಮ 1964ರ ಅಧ್ಯಾಯ 111-ಎ ನೆರೆಹೊರೆ ಗುಂಪು ಪ್ರದೇಶ ಸಭಾ ಮತ್ತು ವಾರ್ಡ್ ಸಮಿತಿ 80 ಎ ಯಿಂದ 80ಕ್ಕೂ ಅಧಿನಿಯಮಗಳನ್ನು ಪಾಲಿಸಿಲ್ಲ. ಹಾಗಾಗಿ ನಗರಸಭೆ ವ್ಯಾಪ್ತಿಯ ಪ್ರತಿ ಮನೆಯ 24*7 ಮೀಟರ್‌ನ ನೀರಿನ ಶುಲ್ಕವು ಹಿಂದಿನಂತೆ ಪ್ರತಿ ತಿಂಗಳಿಗೆ 120 ರೂ. ಗಳಂತೆ 15 ದಿನಗಳಲ್ಲಿ ನಿಗದಿ ಮಾಡಿಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ. ಇದನ್ನು ತಪ್ಪಿದ್ದಲ್ಲಿ ಸಾರ್ವಜನಿಕರ ಪರವಾಗಿ ನಗರಸಭೆ ಕಚೇರಿ ಮುಂದೆ ಪ್ರತಿಭಟನೆ ಮಾಡುವುದಾಗಿ ನಾಮನಿರ್ದೇಶಿತ ಮಾಜಿ ಸದಸ್ಯ ಮಧುಚಂದ್ರ ಅವರು ನಗರಸಭೆ ಪೌರಾಯುಕ್ತರಿಗೆ ನೀಡಿರುವ ಮನವಿ ಪತ್ರದಲ್ಲಿ ಎಚ್ಚರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net