

ಮದ್ದೂರು: ಪುರಸಭೆ ವ್ಯಾಪ್ತಿಯ ಆಸ್ತಿ ತೆರಿಗೆ ಮತ್ತು ಕುಡಿಯುವ ನೀರಿನ ಸರ್ಕಾರದ ಮಾರ್ಗಸೂಚಿಯನ್ವಯ ಗುರುವಾರ ನಡೆದ ವಿಶೇಷ ಸಭೆ ವೇಳೆ ತೆರಿಗೆ ಹೆಚ್ಚಳ ಸಂಬಂಧ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಪಟ್ಟಣದ ಪುರಸಭೆಯ ಎಸ್.ಎಂ.ಕೃಷ್ಣ ಸಭಾಂಗಣದಲ್ಲಿ ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ ವಿಚಾರದಲ್ಲಿ ಅಲ್ಪ ಪ್ರಮಾಣದ ಹೆಚ್ಚುವರಿಗೆ ಸಮ್ಮತಿಸಿದ ಸದಸ್ಯರು, ಕುಡಿಯುವ ನೀರು ತೆರಿಗೆ ಹೆಚ್ಚಳಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು.
ಸದರಿ ವಿಚಾರವಾಗಿ ಸದಸ್ಯರ ಮನವೊಲಿಕೆಗೆ ಮುಂದಾದ ಮುಖ್ಯಾಧಿಕಾರಿ ಮೀನಾಕ್ಷಿ, ಪ್ರಸಕ್ತ ಸಾಲಿನಲ್ಲಿ ಸರ್ಕಾರದಿಂದ ಮಂಜೂರಾಗಬೇಕಿರುವ 16ನೇ ಹಣಕಾಸು ಯೋಜನೆಯ ಸದ್ಬಳಕೆಗೆ ತೆರಿಗೆಗಳ ಹೆಚ್ಚಳವು ಅನಿವಾರ್ಯವಾಗಿದ್ದು, ಅಲ್ಪ ಪ್ರಮಾಣದಲ್ಲಾದರೂ ತೆರಿಗೆ ಹೆಚ್ಚಳಕ್ಕೆ ಸಮ್ಮತಿಸುವಂತೆ ಸಭೆಗೆ ವಿವರಿಸಿದರು. ಕಳೆದ ಸಾಲಿನಲ್ಲಿ ಆಡಳಿತಾಧಿಕಾರಿಯ ಅವಧಿ ವೇಳೆ ಪುರಸಭೆ ವ್ಯಾಪ್ತಿಯ ಕುಡಿಯುವ ನೀರಿನ ತೆರಿಗೆಯನ್ನು 100ರಿಂದ 200 ರೂ.ಗಳಿಗೆ ಅಂದರೆ ಶೇ. 100ರಷ್ಟು ಹೆಚ್ಚಳ ಮಾಡಿದ್ದು ಪ್ರಸ್ತುತ ದರ ಹೆಚ್ಚಿಸುವ ಅಗತ್ಯವೆನೆಂದು ಸದಸ್ಯರಾದ ಎಂ.ಐ.ಪ್ರವೀಣ್, ಪ್ರಿಯಾಂಕಾ, ಸರ್ವಮಂಗಳಾ, ಸುರೇಶ್ ಮತ್ತಿತರು ಆಕ್ಷೇಪ ವ್ಯಕ್ತಪಡಿಸಿದರು. ಸುದೀರ್ಘ ಚರ್ಚೆ ಬಳಿಕ ಶೇ.5 ರಷ್ಟು ತೆರಿಗೆ ಹೆಚ್ಚಳಕ್ಕೆ ಸಮ್ಮತಿಸಿದ ಸಭೆಯು ಪಟ್ಟಣ ವ್ಯಾಪ್ತಿಯಲ್ಲಿ ಬೇಸಿಗೆ ಸಂದರ್ಭದ ಕುಡಿಯುವ ನೀರು ನಿರ್ವಹಣೆ ಕುರಿತು ಕೈಗೊಳ್ಳಬೇಕಾದ ಮುಂಜಾಗ್ರತೆ ಕುರಿತಾಗಿ ಅಧಿಕಾರಿಗಳಿಗೆ ತಾಕೀತು ಮಾಡಿತು.
ಇದಕ್ಕೆ ದನಿಗೂಡಿಸಿದ ಸದಸ್ಯರಾದ ಪ್ರವೀಣ್, ಆದಿಲ್, ಪ್ರಿಯಾಂಕ, ಮಹೇಶ್, ಸಿದ್ದರಾಜು, ಮನೋಜ್ ಮತ್ತಿತರ ಸದಸ್ಯರ ಸಲಹೆಯನ್ನು ಪರಿಗಣಿಸುವುದಾಗಿ ಈ ಸಂಬಂಧ ಯೋಜನಾ ನಿರ್ದೇಶಕರ ಸಮ್ಮುಖದಲ್ಲಿ ಶಾಸಕ ಕೆ.ಎಂ.ಉದಯ ಅವರು ಸಭೆ ಆಯೋಜಿಸಿದ್ದು ಸಾಧಕ, ಬಾಧಕಗಳ ಚರ್ಚೆ ಬಳಿಕ ಅಂತಿಮ ನಿರ್ಣಯವನ್ನು ಸದಸ್ಯರ ಗಮನಕ್ಕೆ ತರುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.
ಈ ಹಿಂದೆ ಆರೋಗ್ಯ ಶಾಖೆಗೆ ಅಗತ್ಯ ಸಿಬ್ಬಂದಿ ಒದಗಿಸುವ ಸಂಬಂಧ ಹೊರಗುತ್ತಿಗೆ ಪಡೆದಿದ್ದ ಟೆಂಡರ್‌ದಾರರ ಅವಧಿ ಮುಕ್ತಾಯಗೊಂಡಿರುವ ಬಗ್ಗೆ ಮತ್ತು ಈ ಹಿಂದೆ ಹೊರಗುತ್ತಿಗೆ ಪಡೆದಿದ್ದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಸದರಿ ಸೇವೆಯನ್ನು ಅಂತ್ಯಗೊಳಿಸಲು ಸಭೆ ವೇಳೆ ತೀರ್ಮಾನಿಸಲಾಯಿತು.
ಸದಸ್ಯರಾದ ಬಸವರಾಜು, ಲತಾ, ಸಿದ್ದರಾಜು, ಪ್ರಮೀಳಾ, ವನಿತಾ, ಶಾಂತಮ್ಮ, ಶೋಭಾ, ಪ್ರಿಯಾಂಕಾ, ಮಹೇಶ್, ಮನೋಜ್, ಎಂ.ಐ.ಪ್ರವೀಣ್, ಸುರೇಶ್, ಬಿ.ಸಿ.ಸರ್ವಮಂಗಳಾ, ನಂದೀಶ್, ರತ್ನಾ, ಅಜ್ಲಾನ್‌ಖಾನ್, ವೆಂಕಟೇಶ್ ಇತರರಿದ್ದರು.