ಮೈಸೂರು: ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನಗಳಲ್ಲಿ ಸೇವಾ ಶುಲ್ಕ ಏರಿಕೆ ಮಾಡಿರುವುದು ಸರಿಯಲ್ಲ ಎಂದು ಜೆಡಿಎಸ್ ನಗರ ಕಾರ್ಯಾಧ್ಯಕ್ಷ ಎಸ್.ಪ್ರಕಾಶ್ ಪ್ರಿಯದರ್ಶನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ 220 ರೂ.ಗೆ ಇದ್ದ ಪಂಚಾಮೃತಾಭಿಷೇಕ ಸೇವೆಯನ್ನು 300 ರೂ.ಗೆ ಏರಿಕೆ ಮಾಡಲಾಗಿತ್ತು. ಆದರೆ ಈಗ ಆ ಸೇವೆಯನ್ನು ಸ್ಥಗಿತಗೊಳಿಸಿ ಏಕದಶವಾರ ಅಭಿಷೇಕ ಸೇವೆ ಎಂದು ಅದಕ್ಕಾಗಿ 550 ರೂ. ವಸೂಲಿ ಮಾಡಲು ಮುಂದಾಗಿರುವುದು ದುರಾಲೋಚನೆಯ ಕ್ರಮವಾಗಿದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಸಾಮಾನ್ಯ ಜನರಿಗೆ ದೇವರ ಸೇವೆ ಮಾಡಲು ಅನುಕೂವಾಗಿತ್ತು. ಆದರೆ ದೇವಸ್ಥಾನದ ಆಡಳಿತ ಮಂಡಳಿ, ಏಕಾಏಕಿ 550 ರೂ. ಅಭಿಷೇಕ ಸೇವೆ ಅನಿವಾರ್ಯ ಮಾಡಿದ್ದಾರೆ. ತಮ್ಮ ಕುಟುಂಬದವರ ಹುಟ್ಟುಹಬ್ಬ, ಇನ್ನಿತರ ಶುಭ ಸಂದರ್ಭದಲ್ಲಿ ಕಡಿಮೆ ಶುಲ್ಕದ ಸೇವೆಗೆ ಟಿಕೆಟ್ ಪಡೆಯುತ್ತಿದ್ದವರಿಗೆ ಇದರಿಂದ ಭಾರಿ ಹೊಡೆತ ಬಿದ್ದಿದೆ ಎಂದು ಆರೋಪಿಸಿದರು.
ಸರ್ಕಾರ ಈಗಾಗಲೇ ಬಸ್ ಪ್ರಯಾಣ ಸೇರಿದಂತೆ ಇನ್ನಿತರೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಆದರೆ ಈಗ ದೇವಸ್ಥಾನಗಳ ಸೇವೆಯ ಮೇಲೂ ಕಣ್ಣಿಟ್ಟಿರುವುದು ಸುಲಿಗೆ ಆಗಿದೆ. ಆದ್ದರಿಂದ ಬೆಟ್ಟದಲ್ಲಿ ಈ ಹಿಂದೆ ಇದ್ದಂತೆ ಕಡಿಮೆ ದರದ ಸೇವೆ ಮುಂದುವರಿಸಬೇಕೆಂದು ಆಗ್ರಹಿಸಿದರು.
ಮುಖಂಡರಾದ ರಾಜಶೇಖರ್, ಸುಹಾಸ್, ಚಂದ್ರು, ಮಧುವನ ಚಂದ್ರು, ಫಾಲ್ಕನ್ ಬೋರೇಗೌಡ, ಪಿ.ಕುಮಾರ್ ಇತರರು ಇದ್ದರು.