ವಿದೇಶಿ ಅಡಕೆ ಅಮದಿಗೆ ರೈತರ ವಿರೋಧ

24 nrp 6
Published on

ಎನ್.ಆರ್.ಪುರ: ಕೇಂದ್ರ ಸರ್ಕಾರ ವಿದೇಶದಿಂದ ಅಡಕೆ ಆಮದು ಮಾಡಿಕೊಳ್ಳುತ್ತಿರುವುದನ್ನು ವಿರೋಧಿ ತಾಲೂಕು ಕಾಂಗ್ರೆಸ್ ಘಟಕದಿಂದ ಸೋಮವಾರ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಅಂಶುಮಂತ್ ಮಾತನಾಡಿ, ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ರೈತ ವಿರೋಧಿ ನೀತಿ ಅನುಸರಿಸುತ್ತಿದ್ದು , ದೇಶದ ಗುಟ್ಕಾ ಕಂಪನಿಗಳಿಗೆ ಅನುಕೂಲ ಮಾಡಿಕೊಡಲು ವಿದೇಶದಿಂದ ಕಳಪೆ ಅಡಕೆ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯ ಖಾತೆ ಆರೋಗ್ಯ ಸಚಿವರಾಗಿರುವ ಅನುಪ್ರಿಯ ಪಾಟೀಲ್ ಅಡಕೆ ಕ್ಯಾನ್ಸರ್‌ಕಾರಕ ಎಂಬ ವರದಿ ನೀಡುವ ಮೂಲಕ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದ್ದಾರೆ ಎಂದು ದೂರಿದರು.
ಬಿಜೆಪಿಗೆ ಚುನಾವಣೆ ಸಂದರ್ಭದಲ್ಲಿ ನೆರವು ನೀಡಿರುವ ಉತ್ತರ ಭಾರತದ ಗುಟ್ಕಾ ಕಂಪನಿ ಉದ್ಯಮಿಗಳಿಗೆ ಅನುಕೂಲ ಮಾಡಿಕೊಡಲು ದೇಶದಲ್ಲಿ ಬೆಳೆಯುವ ಅಡಕೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸದೆ ಭೂತಾನ್ ನಿಂದ 17ಸಾವಿರ ಟನ್ ಕಳಪೆ ಅಡಕೆ ಆಮದು ಮಾಡಿಕೊಡುವ ಮೂಲಕ ದೇಶದ ಅಡಕೆ ಬೆಲೆ ಕುಸಿತಕ್ಕೆ ಕಾರಣವಾಗಿದೆ. ಕೇಂದ್ರ ಸರ್ಕಾರ ಅಡಕೆಯನ್ನು ಅರಣ್ಯ ಉತ್ಪನ್ನ ಎಂದು ಘೋಷಿಸಲು ಹೊರಟಿದ್ದು, ಒಂದು ವೇಳೆ ಅಡಕೆ ಅರಣ್ಯ ಉತ್ಪನ್ನ ಎಂದು ಘೋಷಣೆಯಾದರೆ ರೈತರು ಅಡಕೆ ಬೆಳೆಯಲು ಅರಣ್ಯ ಇಲಾಖೆ ಒಪ್ಪಿಗೆ ಪಡೆಯಬೇಕಾಗುತ್ತದೆ ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್.ಸುಬ್ರಹ್ಮಣ್ಯ ಮಾತನಾಡಿ, ಅಡಕೆ ಬೆಳೆಗೆ ತಗಲಿರುವ ಹಲವು ರೋಗಗಳಿಂದ ಬೆಳೆ ಕುಸಿತವಾಗಿದೆ. ರೈತರಿಗೆ ಧೈರ್ಯ ತುಂಬ ಬೇಕಾದ ಸರ್ಕಾರ ಅಡಕೆಯನ್ನು ಪಾರಂಪರಿಕ ಬೆಳೆ ಎಂದು ಘೋಷಿಸುವ ಮೂಲಕ, ವಿದೇಶದಿಂದ ಆಮದಾಗುವ ಅಡಕೆ ಮೇಲೆ ಸುಂಕ ವಿಧಿಸದೆ ದೇಶಿಯ ಅಡಿಕೆಯ ಬೆಲೆ ಕುಸಿತವಾಗಲು ಕಾರಣವಾಗಿದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗ ರೈತರನ್ನು ಭೂಗಳ್ಳರು ಎಂದು ಹಣೆ ಪಟ್ಟಿ ಕಟ್ಟಿತ್ತು. ಕೇಂದ್ರ ಸರ್ಕಾರವೂ ಪ್ರಸ್ತುತ ರೈತರ ವಿರೋಧಿ ನೀತಿ ಅನುಸರಿಸುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net