

ಹಿರೇಕೆರೂರ: ಪಟ್ಟಣದಲ್ಲಿ ಅನಧಿಕೃತವಾಗಿ ಕಸಾಯಿ ಖಾನೆಗಳು ಕಾರ್ಯನಿರ್ವಹಿಸುತ್ತಿರುವುದು ಮತ್ತು ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವುದನ್ನು ವಿರೋಧಿಸಿ ತಾಲೂಕು ವಿಶ್ವ ಹಿಂದು ಪರಿಷತ್, ಬಜರಂಗದಳ ವತಿಯಿಂದ ಶನಿವಾರ ಪಟ್ಟಣದ ಪೊಲೀಸ್ ಠಾಣೆ ಆವರಣದಲ್ಲಿ ಪಿಎಸ್ಐ ನೀಲಪ್ಪ ನರಲಾರ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಬಜರಂಗದಳ ಸಹ ಸಂಯೋಜಕ ವಿನಾಯಕ ಕರ್ನಲ ಮಾತನಾಡಿ, ಪಟ್ಟಣದಲ್ಲಿ ಎಲ್ಲೆಂದರಲ್ಲಿ ಅನಧಿಕೃತವಾಗಿ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಪಟ್ಟಣ ಪಂಚಾಯಿತಿಯಿಂದ ಪರವಾನಗಿ ಪಡೆಯದೆ ರಾಜಾರೋಷವಾಗಿ ಗೋ ಮಾಂಸ ಮಾರಾಟ ಮಾಡುತ್ತಿದ್ದಾರೆ ಹಾಗೂ ಗೋ ಸಾಗಾಟ ಮಾಡುತ್ತಾ ಬಂದಿದ್ದಾರೆ. ಬಕ್ರೀದ್ ಹಬ್ಬ ಸಮೀಪಿಸುತ್ತಿದ್ದು, ಹೆಚ್ಚಿನ ಸಂಖ್ಯೆಗಳಲ್ಲಿ ಅಂದು ಗೋವುಗಳ ಹತ್ಯೆಗೆ ಮುಂದಾಗುತ್ತಿದ್ದಾರೆ. ತಾವು ಈ ಬಗ್ಗೆ ಹೆಚ್ಚಿ ನಿಗಾವಹಿಸಿ ಅನಧಿಕೃತ ಕಸಾಯಿಖಾನೆಗಳು ಬಂದ್ ಮಾಡಿಸಬೇಕು ಹಾಗೂ ಅಕ್ರಮ ಗೋ ಸಾಗಾಟ ತಡೆಯಬೇಕು ಎಂದು ಆಗ್ರಹಿಸಿದರು.
ವಿಶ್ವ ಹಿಂದು ಪರಿಷತ್, ಬಜರಂಗದಳದ ಪದಾಧಿಕಾರಿಗಳಾದ ಸಂತೋಷ ಬೆಳಗುತ್ತಿ, ಬಸವರಾಜ ಓಲೇಕಾರ್, ಶ್ರೇಯಸ್, ವಿನಾಯಕ್ ನೇಸ್ವಿ, ಅಭಿಷೇಕ ಬೊಂಗಾಳೆ, ಶರತ್, ಜೀವನ, ಸಂಜು, ಪರಶುರಾಮ, ಪ್ರಮೋದ, ಧೀರಜ್, ಚಿಂಟು, ಇತರರಿದ್ದರು.