ಹಿಂದಿ ದಿವಸ ಆಚರಣೆಗೆ ವಿರೋಧ: ಮಂಡ್ಯದಲ್ಲಿ ಕನ್ನಡ ಪರ ಸಂಘಟನೆಗಳಿಂದ ಪ್ರತಿಭಟನೆ

Protest (2)
Published on

ಮಂಡ್ಯ: ಹಿಂದಿ ದಿವಸ ಆಚರಣೆಯನ್ನು ವಿರೋಧಿಸಿ ನಗರದಲ್ಲಿ ಬುಧವಾರ ಎರಡು ಪ್ರತ್ಯೇಕ ಪ್ರತಿಭಟನೆ ನಡೆಯಿತು.

ನಗರದ ಗಾಂಧಿಭವನದ ಎದುರು ಜಮಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ(ಎಚ್.ಶಿವರಾಮೇಗೌಡ ಬಣ) ಕಾರ್ಯಕರ್ತರು ಮೆರವಣಿಗೆ ಮೂಲಕ ಸಾಗಿ ವಾಣಿಜ್ಯ ತೆರಿಗೆ ಇಲಾಖೆ ಎದುರು ಧರಣಿ ನಡೆಸಿದರು. ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಭಾರತ ಸಾವಿರಾರು ಭಾಷೆ ಹಾಗೂ ಉಪ ಭಾಷೆಗಳನ್ನು ಒಳಗೊಂಡ 560ಕ್ಕೂ ಹೆಚ್ಚು ಸಂಸ್ಥಾನಗಳು ಒಪ್ಪಿ ಸೇರಿದ ಮತ್ತು ಸಾಮಾಜಿಕ, ಸಾಂಸ್ಕೃತಿಕವಾಗಿ ಭಿನ್ನ ಆಚರಣೆಗಳನ್ನು ಹೊಂದಿರುವ ಮಹಾನ್ ಒಕ್ಕೂಟ. ಹೀಗಿರುವಾಗ ಒಂದು ಭಾಷೆಯನ್ನು ಮಾತ್ರವೇ ಮೆರೆಸುವುದು ನಿಜಕ್ಕೂ ಜನತೆಗೆ ಎಸಗುವ ಅನ್ಯಾಯ. ಸೆ.14ರಂದು ಹಿಂದಿ ದಿವಸವನ್ನು ಕರ್ನಾಟಕದಲ್ಲಿ ಒತ್ತಾಯಪೂರ್ವಕವಾಗಿ ಆಚರಿಸುವುದು ರಾಜ್ಯ ಸರ್ಕಾರ ಕನ್ನಡಿಗರಿಗೆ ಮಾಡುವ ದ್ರೋಹ. ಹಿಂದಿ ಭಾಷೆ ತುರುಕುವಿಕೆಯಿಂದ ನೆಮ್ಮದಿ ಕದಡುವುದು ಬೇಡ ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾಧ್ಯಕ್ಷ ಎಚ್.ಡಿ.ಜಯರಾಮ್, ನಗರಾಧ್ಯಕ್ಷ ಟಿ.ಕೆ.ಸೋಮಶೇಖರ್, ಶಂಕರ್, ಮುದ್ದೇಗೌಡ, ಮಹೇಂದ್ರ ಇತರರಿದ್ದರು.

ಹಿಂದಿ ದಿವಸ ಆಚರಣೆ ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ)ಯಿಂದ ಅಂಚೆ ಕಚೇರಿ ಎದುರು ಪ್ರತಿಭಟನೆ ಮಾಡಲಾಯಿತು. ರಾಜ್ಯ ಉಪಾಧ್ಯಕ್ಷ ಎಂ.ಎಸ್.ಚಿದಂಬರ್ ಹಾಗೂ ಜಿಲ್ಲಾಧ್ಯಕ್ಷ ಕೆ.ಟಿ.ಶಂಕರೇಗೌಡ ನೇತೃತ್ವದಲ್ಲಿ ವಿ.ವಿ ರಸ್ತೆಯಲ್ಲಿ ಮೆರವಣಿಗೆ ಮೂಲಕ ಬಂದು ಧರಣಿ ನಡೆಸಲಾಯಿತು.

ಭಾರತಕ್ಕೆ ಯಾವುದೇ ಒಂದು ರಾಷ್ಟ್ರಭಾಷೆ ಇಲ್ಲ. ಸಂವಿಧಾನದ ಎಂಟನೇ ಪರಿಚ್ಛೇದದಲ್ಲಿರುವ ಎಲ್ಲ 22 ಭಾಷೆಗಳೂ ರಾಷ್ಟ್ರೀಯ ಭಾಷೆಗಳೇ ಆಗಿದೆ. ಆದ್ದರಿಂದ ಈ ಅಸಮಾನತೆಯನ್ನು ತೊಡೆದು ಸಮಾನತೆಯನ್ನು ಎತ್ತಿಹಿಡಿಯುವ ನಿಟ್ಟಿನಲ್ಲಿ 22 ಭಾಷೆಗಳನ್ನು ಕೇಂದ್ರ ಸರ್ಕಾರದ ಆಡಳಿತ ಭಾಷೆಗಳನ್ನಾಗಿ ಮಾಡಬೇಕು. ಇದರೊಂದಿಗೆ ಹಿಂದಿ ಮತ್ತು ಆಂಗ್ಲಕ್ಕೆ ನೀಡಲಾಗಿರುವ ಮಾನ್ಯತೆಯ ಜತೆಗೆ ಅವಕಾಶಗಳೂ ಸಿಗುವಂತಾಗಬೇಕು. ಹಿಂದಿ ದಿವಸ, ಹಿಂದಿ ಪಕ್ವಾಡಾದಂತಹ ಕಾರ್ಯಕ್ರಮಗಳನ್ನು ಕೂಡಲೇ ನಿಲ್ಲಿಸಬೇಕು. ಯಾವ ಭಾಷೆಗೂ ಹೆಚ್ಚಿನ ಮಾನ್ಯತೆ ಕೊಡಬಾರದು. ಅಂತೆಯೇ ನಿರ್ಲಕ್ಷೃವನ್ನು ಮಾಡಬಾರದು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕಾಮಧೇನು ರಮೇಶ್, ಅಶೋಕ್, ಸತೀಶ್, ನಾಗರಾಜು, ಜವರಯ್ಯ, ಕೃಷ್ಣ, ಪುಟ್ಟಮಲ್ಲಯ್ಯ, ಪ್ರಭಾವತಿ, ಜಯಶೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net