ಹರೀಸಂದ್ರ ಕಸ ವಿಲೇ ಘಟಕಕ್ಕೆ ವಿರೋಧ

22-04-rama-Kasa1
Published on

* ಹಿರಿಯ ಕಾಂಗ್ರೆಸ್ ಮುಖಂಡ ರಾಜೀನಾಮೆ

* ಶಾಸಕ ಇಕ್ಬಾಲ್ ಹುಸೇನ್‌ಗೆ ವಿದ್ಯಾರ್ಥಿಗಳು ಪತ್ರ

ರಾಮನಗರ

ತಾಲೂಕಿನ ಹರೀಸಂದ್ರದ ಬಳಿ ರಾಮನಗರ ನಗರಸಭೆಯಿಂದ ನಿರ್ಮಾಣಗೊಳ್ಳುತ್ತಿರುವ ಕಸ ವಿಲೇವಾರಿ ಘಟಕಕ್ಕೆ ಸ್ಥಳೀಯರ ವಿರೋಧ ಹೆಚ್ಚಾಗುತ್ತಲೇ ಇದ್ದು, ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರೆ, ವಿದ್ಯಾರ್ಥಿಗಳು ಶಾಸಕರಿಗೆ ಪತ್ರ ಬರೆದು ತಮ್ಮ ನೋವು ತೋಡಿಕೊಂಡಿದ್ದಾರೆ.

ರಾಮನಗರದಲ್ಲಿ ದಿನೇದಿನ ಕಸದ ಸಮಸ್ಯೆ ಹೆಚ್ಚುತ್ತಿದೆ. ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡುವ ಪ್ರಯತ್ನಗಳಿಗೆ ಹಿನ್ನಡೆಯಾಗುತ್ತಿದ್ದು, ಭೂಮಿಗೆ ಕಸವನ್ನು ಹಾಕಿ ಮಣ್ಣು ಮುಚ್ಚುವ ಕೆಲಸ ಸದ್ದಿಲ್ಲದೆ ಸಾಗಿದೆ. ಇದರ ನಡುವೆ ಹರೀಸಂದ್ರ ಗ್ರಾಮದ ಸರ್ವೇ ನಂ. 166ರಲ್ಲಿ 10 ಎಕರೆ ಸರ್ಕಾರಿ ಭೂಮಿಯನ್ನು ರಾಮನಗರ ಕಸ ವಿಲೇವಾರಿಗೆ ನೀಡಲಾಗಿದ್ದು, ಹಿಂದಿನಿಂದಲೂ ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಭೂಮಿ ಪೂಜೆ ಕಾರ್ಯಕ್ಕೆ ಸ್ಥಳೀಯರು ಅಡ್ಡಿಪಡಿಸಿದಾಗ ಶಾಸಕರು ಹಾಗೂ ನಗರಸಭೆ ಬರಿಗೈಲಿ ವಾಪಾಸಾಗಿತ್ತು. ಈಗ ಮತ್ತೆ ಪೊಲೀಸ್ ಬಲದೊಂದಿಗೆ ಕಸ ವಿಲೇವಾರಿ ಘಟಕ ನಿರ್ಮಾಣಕ್ಕೆ ನಗರಸಭೆ ಚಾಲನೆ ನೀಡಿತು. ಆದರೆ, ಇದಕ್ಕೆ ಸ್ಥಳೀಯವಾಗಿ ವಿರೋಧ ಹೆಚ್ಚುತ್ತಲೇ ಇದ್ದು, ಈ ಭಾಗದ ಶಾಲಾ ಮಕ್ಕಳು ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ಪತ್ರ ಬರೆಯುವ ಮೂಲಕ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡದಂತೆ ಮನವಿ ಮಾಡಿದ್ದಾರೆ.

ಪತ್ರದಲ್ಲಿ ಏನಿದೆ?

ಹರೀಸಂದ್ರದ ಚಿಕ್ಕೇಗೌಡನದೊಡ್ಡಿ ಗ್ರಾಮದ ಮೂವರು ವಿದ್ಯಾರ್ಥಿಗಳು ಶಾಸಕರಿಗೆ ಪತ್ರ ಬರೆಯುವ ಮೂಲಕ ಕಸ ಹಾಕುವ ಮೂಲಕ ನಮ್ಮ ಪರಿಸರವನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ನಮ್ಮ ಊರಿನ ಪಕ್ಕದಲ್ಲಿಯೇ ಅರ್ಕಾವತಿ ನದಿ ಹರಿಯುತ್ತಿದೆ. ಈ ನದಿಯೂ ಕಲುಷಿತಗೊಳ್ಳುತ್ತದೆ. ಜತೆಗೆ ನಮ್ಮ ವ್ಯಾಪ್ತಿಯ ಕಾಡು ಪ್ರಾಣಿ, ಪಶು ಪಕ್ಷಿಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಲ್ಲದೆ, ಕಸ ವಿಲೇವಾರಿ ಘಟಕದ ಸುತ್ತ ಮುತ್ತಲ ಹಳ್ಳಿಗಳ ಜನರಿಗೆ ಆರೋಗ್ಯದ ಸಮಸ್ಯೆ ಕಾಡುತ್ತದೆ. ದಯ ಮಾಡಿ ಬೇರೊಂದು ಸೂಕ್ತ ಪ್ರದೇಶಕ್ಕೆ ಕಸ ವಿಲೇವಾರಿ ಘಟಕವನ್ನು ಸ್ಥಳಾಂತರ ಮಾಡಿ, ನಮ್ಮ ಭಾಗದ ಜನರ ಆರೋಗ್ಯ ಮತ್ತು ಪರಿಸರವನ್ನು ಉಳಿಸಿ ಎಂದು ಕನ್ನಡ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಪತ್ರವನ್ನು ಬರೆದು ಕೋರಿದ್ದಾರೆ.

ಮುಖಂಡ ರಾಜೀನಾಮೆ?

ಹರೀಸಂದ್ರ ವ್ಯಾಪ್ತಿಯ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ತಾಲೂಕು ಬಗರ್ ಹುಕುಂ ಸಮಿತಿ ಸದಸ್ಯ ಆರ್. ದೊಡ್ಡವೀರಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪತ್ರವನ್ನು ಬಗರ್ ಹುಕುಂ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆದ ತಹಸೀಲ್ದಾರ್ ಅವರಿಗೆ ನೀಡಿದ್ದಾರೆ. ಇವರ ರಾಜೀನಾಮೆಗೆ ಹರೀಸಂದ್ರ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಘಟಕ ಮಾಡುತ್ತಿರುವುದೇ ಕಾರಣ ಎನ್ನಲಾಗಿದೆ. ನಮ್ಮ ಭಾಗದಲ್ಲಿ ಘಟಕ ಮಾಡಬೇಡಿ ಎಂದು ಶಾಸಕರ ಬಳಿ ಕೇಳಿಕೊಂಡರೂ, ಇದಕ್ಕೆ ಒಪ್ಪದ ಕಾರಣ ಅವರು ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಒಟ್ಟಾರೆ ರಾಮನಗರ ಕಸಕ್ಕೆ ಮುಕ್ತಿ ನೀಡುವ ಪ್ರಯತ್ನಕ್ಕೆ ಇನ್ನಿಲ್ಲದ ಅಡೆತಡೆ ನಿರ್ಮಾಣವಾಗುತ್ತಲೇ ಇದ್ದು, ನಗರಸಭೆ ಮತ್ತು ಜಿಲ್ಲಾಡಳಿತ ವೈಜ್ಞಾನಿಕ ರೀತಿಯಲ್ಲಿ ಕಸ ವಿಲೇವಾರಿಗೆ ಹೆಚ್ಚು ಗಮನ ಹರಿಸುವ ಅಗತ್ಯವಿದೆ.

ಕಸ ವಿಲೇವಾರಿ ಘಟಕ ಹರೀಸಂದ್ರ ಭಾಗದಲ್ಲಿ ಮಾಡದಂತೆ ಶಾಸಕರಿಗೆ ಮನವಿ ಮಾಡಿದ್ದೆ. ಆದರೆ, ಕೆಲಸ ಚಾಲ್ತಿಯಲ್ಲಿದೆ. ನನ್ನ ರಾಜೀನಾಮೆಗೆ ಕಸ ವಿಲೇವಾರಿ ಘಟಕ ನಿರ್ಮಾಣವೂ ಒಂದು ಕಾರಣ. ಆರ್.ದೊಡ್ಡ ವೀರಯ್ಯ, ಕಾಂಗ್ರೆಸ್ ಮುಖಂಡತಾಜ್ಯವಿಲೇವಾರಿಯಿಂದ ನಮ್ಮ ಪರಿಸರ, ಆರೋಗ್ಯ ಮತ್ತು ಆರ್ಥಿಕತೆಯ ಮೇಲೆ ಆಗುವ ಪರಿಣಾಮದ ಬಗ್ಗೆ ನನಗೆ ತೀವ್ರ ಕಳವಳ ಇದೆ. ನಮ್ಮ ಗ್ರಾಮ ಕೃಷಿ ಅವಲಂಬಿತವಾಗಿದ್ದು ಕೃಷಿ ಜತೆಗೆ ಪಕ್ಕದ ರಣಹದ್ದು ವನ್ಯ ಜೀವಿಧಾಮಕ್ಕೂ ಅಪಾಯ ತಪ್ಪಿದ್ದಲ್ಲ. ವರ್ಷ ಸಿ.ಎಸ್. ವಿದ್ಯಾರ್ಥಿನಿ(ಶಾಸಕರಿಗೆ ಬರೆದ ಪತ್ರದಲ್ಲಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net