

ಮಂಡ್ಯ: ಚಾಮರಾಜನಗರದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ, ಸಿದ್ದಪ್ಪಾಜಿ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡುವುದಾಗಿ ಘೋಷಣೆ ಮಾಡಿರುವ ರಾಜ್ಯಸರ್ಕಾರದ ನಿಲುವಿಗೆ ಮಳವಳ್ಳಿ ಆದಿಹೊನ್ನಾಯಕನಹಳ್ಳಿ ಹಾಗು ಕಪ್ಪಡಿ ಕ್ಷೇತ್ರಗಳ ಮಠಾಧಿಪತಿ ಎಂ.ಎಲ್.ವರ್ಚಸ್ವೀ ಶ್ರೀಕಂಠ ಸಿದ್ದಲಿಂಗರಾಜೇ ಅರಸ್ ವಿರೋಧ ವ್ಯಕ್ತಪಡಿಸಿದ್ದಾರೆ.
ಮಂಟೇಸ್ವಾಮಿ, ರಾಚಪ್ಪಾಜಿ ಹಾಗೂ ಸಿದ್ದಪ್ಪಾಜಿ ನೆಲೆಯಾಗಿರುವ ಪುಣ್ಯ ಕ್ಷೇತ್ರ ಹಾಗೂ ಇದಕ್ಕೆ ಹೊಂದಿಕೊಂಡಿರುವ ಮಠಗಳು ಸುಮಾರು ಐದು ಶತಮಾನಗಳಷ್ಟು ಪುರಾತನವಾದ ಆಧ್ಯಾತ್ಮಿಕ ಹಾಗೂ ಸಾಂಪ್ರದಾಯಿಕ ಪರಂಪರೆ ಹೊಂದಿವೆ. ಚಿಕ್ಕಲ್ಲೂರು, ಕಪ್ಪಡಿ, ಬಿ.ಜಿ. ಪುರ, ಕುರುಬನಕಟ್ಟೆ ಹಾಗೂ ಆದಿಹೊನ್ನಾಯಕನಹಳ್ಳಿ ಪುಣ್ಯಕ್ಷೇತ್ರಗಳಿಗೆ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ರಾಜ್ಯ ಸರ್ಕಾರ ಏ.24ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿರುವುದು ಸರಿಯಲ್ಲ ಎಂದಿದ್ದಾರೆ.
ಪುಣ್ಯಕ್ಷೇತ್ರಗಳ ಆಚರಣೆ, ಸಂಪ್ರದಾಯ, ಸಂಸ್ಕೃತಿ, ಆಚಾರ, ವಿಚಾರಗಳು ಇತಿಹಾಸ ಹಾಗೂ ಸಮುದಾಯ ನಂಬಿಕೆಗಳಾಗಿವೆ. ಪ್ರಮುಖವಾಗಿ ನೀಲಗಾರರ ನಂಬಿಕೆಗಳ ಮೇಲೆ ತಲತಲಾಂತರಗಳಿಂದ ನಡೆದುಕೊಂಡು ಬಂದಿದ್ದು, ಈ ಕ್ಷೇತ್ರಗಳ ಪಾವಿತ್ರ್ಯತೆಯನ್ನು ಎರಡು ಅನುವಂಶಿಕ ಕುಟುಂಬಗಳು ಅತೀವ ಶ್ರದ್ಧೆ, ಭಕ್ತಿ, ನಂಬಿಕೆಗಳಿಂದ ರಕ್ಷಿಸುತ್ತಾ ಪೋಷಿಸಿಕೊಂಡು ಬಂದಿರುತ್ತವೆ. ಆದರೆ ಈಗ ಶ್ರೀಮಠದ ಮಠಾಧಿಪತಿ, ಪಾಲಕರನ್ನು ಸಂಪರ್ಕಿಸದೆ ಹಾಗೂ ಸಲಹೆ ಪಡೆಯದೇ ನಿರ್ಧಾರ ತೆಗೆದುಕೊಂಡಿರುವುದು ಸರ್ಕಾರ ಧಾರ್ಮಿಕ ಸ್ವಾಯತ್ತತೆಯ ಮೇಲೆ ನೇರ ಹಸ್ತಕ್ಷೇಪ ಹಾಗೂ ಐತಿಹಾಸಿಕವಾಗಿ ನಡೆದುಕೊಂಡು ಬಂದಿರುವ ಸಂಪ್ರದಾಯಗಳನ್ನು ಕಡೆಗಣಿಸಿರುವುದಕ್ಕೆ ಸಮಾನವಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಮಳವಳ್ಳಿ ಮಂಟೇಸ್ವಾಮಿ ಮಠವು ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ಬೆಂಬಲಿಸುವುದಿಲ್ಲ. ಸಚಿವ ಸಂಪುಟದ ಈ ನಿರ್ಧಾರ ಅನಧಿಕೃತ. ಶತಶತಮಾನಗಳಿಂದ ನಡೆದುಕೊಂಡು ಬಂದಿರುವಂತಹ ಆಧ್ಯಾತ್ಮಕ, ಸಾಂಸ್ಕೃತಿಕ ಹಾಗೂ ಸಾಮಾಜಿಕ ಪರಂಪರೆಯ ಮೇಲಿನ ದಾಳಿ ಎಂದು ಪರಿಗಣಿಸುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಕೂಡಲೇ ಅಭಿವೃದ್ಧಿ ಪ್ರಾಧಿಕಾರ ರಚನೆಯ ಪ್ರಸ್ತಾವನೆಯನ್ನು ಹಿಂದಕ್ಕೆ ಪಡೆಯಬೇಕು. ಪ್ರಾಚೀನ ಧಾರ್ಮಿಕ ಮಠ, ಸಂಸ್ಥೆಗಳ ಸ್ವಾಯತ್ತತೆಯನ್ನು ಗೌರವಿಸಬೇಕು. ಪುಣ್ಯಕ್ಷೇತ್ರಗಳ ಮೇಲೆ ಪರಿಣಾಮ ಬೀರುವಂತಹ ಯಾವುದೇ ಕ್ರಮ ಕೈಗೊಳ್ಳುವುದಕ್ಕೆ ಮುಂಚೆ ಸಂಬಂಧಪಟ್ಟವರನ್ನು ಸಂಪರ್ಕಿಸಿ ಚರ್ಚಿಸುವುದು ಸರಿಯಾದ ಕ್ರಮವಾಗಿದೆ. ಮಳವಳ್ಳಿ ಮಂಟೇಸ್ವಾಮಿ ಮಠ ಈ ನಿರ್ಧಾರವನ್ನು ಪ್ರಶ್ನಿಸುವ ಹಾಗೂ ಮಠದ ಪರಂಪರೆಯನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕಾನೂನಾತ್ಮಕ ಹಾಗೂ ಸಾಂವಿಧಾನಾತ್ಮಕ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.