ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗೆ ವಿರೋಧ

Oplus_131072
ಬಡಾವಣೆಯ ವಾಸಿಗಳಿಗೆ ನೀಡಲಾಗಿರುವ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ಪರಿಶೀಲಿಸುವಂತೆ ಒತ್ತಾಯಿಸಿ ನಂಜನಗೂಡು ನಗರಸಭೆಯ ಆವರಣದಲ್ಲಿ ಮಾಜಿ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತ ನಂಜುಂಡಸ್ವಾಮಿ ಅವರಿಗೆ ಗುರುವಾ ಮನವಿ ಸಲ್ಲಿಸಲಾಯಿತು. ಕಪಿಲೇಶ್ ಸಿದ್ದರಾಜು, ಮಹದೇವ ಪ್ರಸಾದ್, ಬಾಲಚಂದ್ರ, ಸಂಜಯ್, ಉಮೇಶ್, ಮೋದಿ ಸೇರಿದಂತೆ ಮತ್ತಿತರರು ಇದ್ದರು.
Published on

ನಂಜನಗೂಡು: ನಗರದಲ್ಲಿ ವಾಸಿಸುವ ನಿವಾಸಿಗಳಿಗೆ ದುಬಾರಿ ವೆಚ್ಚದ ಕುಡಿಯುವ ನೀರಿನ ಬಿಲ್‌ಗಳನ್ನು ನೀಡಲಾಗುತ್ತಿದೆ. ಅನಧಿಕೃತ ಬಡಾವಣೆಗಳಿಗೆ ಎನ್‌ಒಸಿ ನೀಡಿ ದೊಡ್ಡ ಮಟ್ಟದಲ್ಲಿ ಅಧಿಕಾರಿಗಳು ಭ್ರಷ್ಟಾಚಾರಕ್ಕೆ ಮುಂದಾಗಿದ್ದಾರೆ. ತಾಲೂಕಿನಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಅವ್ಯವಹಾರ ನಡೆಯುವ ತಾಣ ನಂಜನಗೂಡು ನಗರಸಭೆಯಾಗಿದೆ ಎಂದು ಆರೋಪಿಸಿ ಮಾಜಿ ಶಾಸಕ ಬಿ.ಹರ್ಷವರ್ಧನ್ ನೇತೃತ್ವದಲ್ಲಿ ನಾಗರಿಕರು ಗುರುವಾರ ನಗರಸಭೆ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಖಾಲಿ ಕೊಡಗಳನ್ನು ಪ್ರದರ್ಶಿಸಿದ ನಾಗರಿಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಾಜಿ ಶಾಸಕ ಹರ್ಷವರ್ಧನ್ ಮಾತನಾಡಿ, ಕಳೆದ ಒಂದೂವರೆ ವರ್ಷಗಳಿಂದ ನಂಜನಗೂಡಿನಲ್ಲಿ ಕಾಂಗ್ರೆಸ್ ಶಾಸಕ ಆಯ್ಕೆಯಾಗಿ ನಗರಸಭೆಯ ಮೊದಲ ಸಭೆಯಲ್ಲಿಯೇ ಭ್ರಷ್ಟಾಚಾರ ಮುಕ್ತ ಆಡಳಿತ ಕಾರ್ಯವೈಖರಿ ನಿರ್ಮಾಣ ಆಗಬೇಕು ಎಂದು ಹೇಳಿ ಕೇವಲ ಮಾತಿನಲ್ಲಿ ಚಾಟಿ ಬೀಸಿದ್ದರು. ಆದರೆ ಈಗ ಅದು ಮರೆಯಾಗಿದೆ. ನಂಜನಗೂಡಿನಲ್ಲಿ ನಿರಂತರವಾಗಿ ಕಳೆದ ಒಂದೂವರೆ ವರ್ಷದಿಂದ ಸರ್ಕಾರಿ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆಯುತ್ತಿದೆ. ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸಮಸ್ಯೆ ಎದುರಾಗಿದೆ. ನನ್ನ ಅಧಿಕಾರ ಅವಧಿಯಲ್ಲಿ ಕೆಲವು ಅನಧಿಕೃತ ಬಡಾವಣೆಗಳಿಗೆ ಮುಂದಾಗಿದ್ದಂತಹ ಸಂದರ್ಭದಲ್ಲಿ ಲೋಪದೋಷ ಕಂಡುಬಂದ ಕೂಡಲೇ ಅವುಗಳಿಗೆ ಕಡಿವಾಣ ಹಾಕಲಾಗಿತ್ತು. ಇಂದಿನ ಶಾಸಕರ ಅವಧಿಯಲ್ಲಿ ಅನಧಿಕೃತ ಬಡಾವಣೆಗಳಿಗೆ ಎನ್‌ಒಸಿ ನೀಡಿ ಉತ್ತೇಜಿಸಲಾಗುತ್ತಿದೆ. ಎಂದು ವಾಗ್ದಾಳಿ ನಡೆಸಿದರು.

ನಗರಸಭೆ ಸದಸ್ಯ ಕಪಿಲೇಶ್ ಸಿದ್ದರಾಜು ಮಾತನಾಡಿ, ಅಧಿಕಾರಿಗಳ ದುರಾಡಳಿತದ ಬಗ್ಗೆ ನಂಜನಗೂಡು ನಗರದ ವಾಸಿಗಳು ಈಗಾಗಲೇ ರೊಚ್ಚಿಗೆದ್ದಿದ್ದಾರೆ. ಕೂಡಲೇ ಎಚ್ಚೆತ್ತು, ಯಥೇಚ್ಛವಾಗಿ ಕುಡಿಯುವ ನೀರಿಗೆ ನೀಡುತ್ತಿರುವ ಬಿಲ್ಲುಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು. ತುರ್ತಾಗಿ ನಾವು ನೀಡಿರುವ ಸಾಕಷ್ಟು ಬೇಡಿಕೆಗಳನ್ನು ಈಡೇರಿಸಿದಿದ್ದಲ್ಲಿ ಕೆಲವೇ ದಿನಗಳ ಒಳಗಾಗಿ ನಗರಸಭೆಯ ಗೇಟ್‌ಗೆ ಬೀಗ ಹಾಕಿ ಪ್ರತಿಭಟನೆಯನ್ನು ಇನ್ನಷ್ಟು ಚುರುಕುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ನಗರಸಭೆಯ ಸದಸ್ಯರಾದ ಮಹದೇವ ಪ್ರಸಾದ್, ಬಾಲಚಂದ್ರ, ಸಂಜಯ್, ಉಮೇಶ್ ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net