

ಮಲೇಬೆನ್ನೂರು: ಸಮೀಪದ ರಾಮನಕಟ್ಟೆ ಪ್ರದೇಶದಲ್ಲಿ ಮಂಜೂರು ಮಾಡಿರುವ ಘನತ್ಯಾಜ್ಯ ವಿಲೇವಾರಿ ಘಟಕ ಸ್ಥಾಪನೆ ವಿರೋಧಿಸಿ ಕೋಮಾರನಹಳ್ಳಿ ಗ್ರಾಮಸ್ಥರು ಬುಧವಾರ ಹೆಳವನಕಟ್ಟೆ ಕೆರೆಗಿಳಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ಚಿನ್ಮೂಲಾದ್ರಿ ಪರ್ವತ ಶ್ರೇಣಿಯಲ್ಲಿನ 100 ಎಕರೆ ವಿಸ್ತೀರ್ಣದ ಕೆರೆ ಜಲಾನಯನ ಪ್ರದೇಶದಲ್ಲಿ ಘನ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ಸರ್ಕಾರ ಮುಂದಾಗಿರುವುದು ಅವೈಜ್ಞಾನಿಕ. ಇದರಿಂದ ಪರಿಸರ ಮಾಲಿನ್ಯ ಖಚಿತ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರ
ಗ್ರಾಪಂ ಮಾಜಿ ಸದಸ್ಯ ಎಲ್. ಪರಮೇಶ್ವರ ನಾಯ್ಕ ಮಾತನಾಡಿ, ಅಧಿಕಾರಿಗಳು ಸಮರ್ಪಕ ರೀತಿಯಲ್ಲಿ ಅಧ್ಯಯನ ನಡೆಸದೆ ಡಿಸಿ ಅವರಿಂದ ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಮಂಜೂರಾತಿ ಪಡೆದಿದ್ದಾರೆ. ಆ ಪ್ರದೇಶದಲ್ಲಿ ಘಟಕ ಸ್ಥಾಪನೆಗೆ ನಮ್ಮ ವಿರೋಧವಿದೆ. ಈ ಕುರಿತು ಶಾಸಕರ ಗಮನಕ್ಕೆ ತರಲಾಗಿದೆ. ಘಟಕ ಸ್ಥಾಪನೆ ಅವಕಾಶ ನೀಡಲಾರೆವು. ಉದ್ದೇಶಿತ ಯೋಜನೆ ಕೈಬಿಟ್ಟು ಕೆರೆಗೆ ನೀರು ತುಂಬಿಸಿ ಜಲಮೂಲ ರಕ್ಷಿಸಬೇಕು ಎಂದು ಒತ್ತಾಯಿಸಿದರು. ನಂತರ ಉಪತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಗ್ರಾಮಸ್ಥ ರಂಗನಾಥ್, ಬಸವರಾಜ್, ಸಂತೋಷ, ಮಂಜಪ್ಪ, ಐರಣಿ ಪುಟ್ಟಪ್ಪ, ಭರ್ಮಪ್ಪ, ಹಾಲೇಶಪ್ಪ, ಶಿವಾನಾಯ್ಕ, ಯು. ಅಣ್ಣಪ್ಪ, ವಿಜಯಕುಮಾರ್, ಮಲ್ಲೇಶ್, ಐ.ರಮೇಶ್, ಮಂಜಪ್ಪ, ಶಿವು, ಪ್ರಕಾಶ್, ರೆಡ್ಡಿ ಹನುಮಂತಪ್ಪ ಇದ್ದರು.