

ರಟ್ಟಿಹಳ್ಳಿ: ಮನೆ ಮತ್ತು ವಾಣಿಜ್ಯ ಬಳಕೆದಾರರ ವಿದ್ಯುತ್ ದರವನ್ನು ಏಕಾಏಕಿ ದುಪ್ಪುಟ್ಟು ಮಾಡಿ ಸಾರ್ವಜನಿಕರಿಗೆ ಆರ್ಥಿಕವಾಗಿ ಹೊರೆ ಮಾಡಲಾಗಿದೆ. ಕೆ.ಇ.ಆರ್.ಸಿ. ಕೈಗೊಂಡಿರುವ ವಿದ್ಯುತ್ ದರ ಏರಿಕೆಯನ್ನು ಸರ್ಕಾರ ಕೂಡಲೇ ತಡೆ ಹಿಡಿಯಬೇಕು ಮತ್ತು ರೈತರ ವಿವಿಧ ಬೇಡಿಕೆಗಳಿಗೆ ಸರ್ಕಾರ ಶೀಘ್ರ ಸ್ಪಂದಿಸಬೇಕು ಎಂದ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಘಟಕದ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ರೈತರು ಕಂಗಾಲಾಗಿದ್ದಾರೆ. ಮುಂಗಾರು ವಿಳಂಬದಿಂದಾಗಿ ರೈತರಿಗೆ ದಿಕ್ಕು ತೋಚದಂತಾಗಿದೆ. ಇಂಥ ಪರಿಸ್ಥಿತಿಯಲ್ಲಿ ವಿದ್ಯುತ್ ದರವನ್ನು ಏರಿಕೆ ಮಾಡಿದ್ದು ಬದುಕು ದುಸ್ತರವಾಗಿದೆ. ವಿದ್ಯುತ್ ದರ ಏರಿಕೆ ಅವೈಜ್ಞಾನಿಕವಾಗಿದ್ದು, ಸರ್ಕಾರ ದರ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದರು.
ಅಕ್ರಮ ಸಕ್ರಮ ಯೋಜನೆಯಡಿ ರಟ್ಟಿಹಳ್ಳಿ ಹಾಗೂ ಹಿರೇಕೆರೂರು ತಾಲೂಕಿನಲ್ಲಿ 2018ರಿಂದ ಇಲ್ಲಿಯವರೆಗೆ ಸುಮಾರು 3000 ಪಂಪ್ಸೆಟ್ ಬಳಕೆದಾರರು 20 ಸಾವಿರ ರೂ. ತುಂಬಿದ್ದು, ಇಲ್ಲಿಯವರೆಗೆ ವಿದ್ಯುತ್ ಕಂಬ, ವೈಯರ್, ಟಿಸಿ ಗಳನ್ನು ಕೊಡುವಲ್ಲಿ ಹೆಸ್ಕಾಂ ವಿಫಲವಾಗಿದೆ. ಟಿ.ಸಿ. ಗಳು ಓವರ್ಲೋಡ್ ಆಗಿರುವುದರಿಂದ ಪದೇಪದೆ ಮೋಟಾರುಗಳು ಸುಟ್ಟಿ ರೈತರು ಐದಾರು ಸಾವಿರ ಖರ್ಚು ಮಾಡಬೇಕಾಗಿದೆ. ತಕ್ಷಣವೇ ಅಕ್ರಮ ಇರುವ ಪಂಪ್ಸೆಟ್ಗಳನ್ನು ಸಕ್ರಮಗೊಳಿಸಿ ಕಂಬ, ವೈಯರ್, ಟಿ.ಸಿ.ಗಳನ್ನು ಒದಗಿಸಬೇಕು ಎಂದು ಆಗ್ರಹಿಸಿದರು.
ನೂತನವಾಗಿ ಹುಲ್ಲತ್ತಿ, ಕುಡುಪಲಿ, ಹೊಸಾವೀರಾಪುರ, ನಿಟ್ಟೂರು, ಹಂಸಭಾವಿ ಗ್ರಾಮಗಳಲ್ಲಿ ನವೀಕರಿಸಿದ 110 ಕೆ.ವಿ. ಗ್ರಿಡ್ಗಳಲ್ಲಿ ಕೆಲಸಗಳನ್ನು ಪ್ರಾರಂಭಿಸಬೇಕು. ಟೆಂಡರ್ ಪ್ರಕ್ರಿಯೆ ಮುಗಿದು 6 ತಿಂಗಳು ಗತಿಸಿದರೂ ಹೊಸ ಗ್ರಿಡ್ಗಳಲ್ಲಿ ಕೆಲಸ ಪ್ರಾರಂಭಿಸಿಲ್ಲ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಗೌರವಾಧ್ಯಕ್ಷ ಬಸನಗೌಡ ಗಂಗಪ್ಪನವರ ಮಾತನಾಡಿ, ಪ್ರಸ್ತುತ ಬಹುತೇಕ ರೈತರು ಬಿತ್ತನೆ ಕಾರ್ಯ ಮಾಡಿ ಮಳೆಯ ನಿರೀಕ್ಷೆಯಲ್ಲಿದ್ದಾರೆ. ಮುಂಗಾರು ವಿಳಂಬದಿಂದಾಗಿ ರೈತರು ಕಂಗಾಲಾಗಿದ್ದಾರೆ. ಸರ್ಕಾರ ಶೀಘ್ರವೇ ಮೋಡ ಬಿತ್ತನೆ ಕಾರ್ಯಕ್ಕೆ ತೊಡಗಬೇಕು. ಡ್ಯಾಂಗಳ ಮೂಲಕ ಕಾಲುವೆಗಳಿಗೆ ನೀರು ಹರಿಸಬೇಕು. ಇಲ್ಲವಾದರೆ ರೈತರು ಸಮಸ್ಯೆ ಅನುಭವಿಸಬೇಕಾಗುತ್ತದೆ ಎಂದು ಹೇಳಿದರು.
ಸರ್ಕಾರಕ್ಕೆ 15 ದಿವಸಗಳ ಗಡುವು ನೀಡಲಾಗುತ್ತಿದ್ದು ರೈತರ ಬೇಡಿಕೆಗಳಿಗೆ ಸ್ಪಂದಿಸಬೇಕು. ಇಲ್ಲವಾದರೆ ಹೆಸ್ಕಾಂ ಕಚೇರಿಗೆ ಬೀಗ ಜಡಿಯುವ ಮೂಲಕ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ರೈತ ಸಂಘದ ಮಲ್ಲನಗೌಡ ಮಾಳಗಿ, ಬಸವರಾಜ ಬಣಕಾರ, ಶಂಭು ಮುತ್ತಗಿ, ಬನಸಗೌಡ ಮಲ್ಲನಗೌಡ್ರ, ತಿರಕನಗೌಡ ಬಸನಗೌಡ್ರ ಇತರರು ಉಪಸ್ಥಿತರಿದ್ದರು.