

ತುಮಕೂರು: ಎತ್ತಿನಹೊಳೆ ಯೋಜನೆ ಭಾಗವಾಗಿ ಬೈರಗೊಂಡ್ಲು ಬಳಿ ಅಣೆಕಟ್ಟು ನಿರ್ಮಾಣ ವಿರೋಧಿಸಿ ಎತ್ತಿನಹೊಳೆ ಯೋಜನೆಯ ರೈತರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ರೈತರು ಪ್ರತಿಭಟನೆ ನಡೆಸಿದರು.
ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣದಿಂದ ಕೊರಟಗೆರೆ ತಾಲೂಕಿನ 8 ಹಳ್ಳಿಗಳು ಹಾಗೂ ದೊಡ್ಡಬಳ್ಳಾಪುರ ತಾಲೂಕಿನ 3 ಹಳ್ಳಿಗಳು ಮುಳುಗಡೆಯಾಗಲಿವೆ. 5 ಸಾವಿರಕ್ಕೂ ಹೆಚ್ಚು ಮಂದಿ ಮನೆ, ಮಠ ಕಳೆದುಕೊಳ್ಳಲಿದ್ದು, ಈ ಅಣೆಕಟ್ಟನ್ನು ಬೇರೆಡೆ ಸ್ಥಳಾಂತರಗೊಳಿಸುವಂತೆ 6 ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದರೂ ಯಾರೊಬ್ಬರೂ ಸ್ಪಂದಿಸದ ಹಿನ್ನೆಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮುಳುಗಡೆಯಾಗುವ ಹಳ್ಳಿಗಳ ನೂರಾರು ರೈತರು ಬಫರ್ ಡ್ಯಾಂ ಕೈಬಿಡುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು.
ಎತ್ತಿನಹೊಳೆ ಯೋಜನೆಯಿಂದ ಉಂಟಾಗುವ ಸಾಮಾಜಿಕ ಪರಿಣಾಮ ಹಾಗೂ ಆರ್ಥಿಕ ಸಂಕಷ್ಟಗಳಿಗೆ ಯಾವ ಯೋಜನೆ ಸಿದ್ಧಪಡಿಸಲಾಗಿದೆ ಎಂಬುದನ್ನು ಸರ್ಕಾರ ಎಲ್ಲಿಯೂ ಸ್ಪಷ್ಟಪಡಿಸಿಲ್ಲ. ಇನ್ನು ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣದಿಂದಾಗುವ ಸಾಮಾಜಿಕ ಪರಿಣಾಮ ಸಮೀಕ್ಷೆ ಅವೈಜ್ಞಾನಿಕವಾಗಿದೆ. ಇನ್ನು ಹಾಲಿ ಜಿಲ್ಲಾಧಿಕಾರಿ ಪ್ರತೀ ಹಳ್ಳಿಗಳಿಗೆ ಭೇಟಿ ನೀಡಿ ವಸ್ತುಸ್ಥಿತಿಯನ್ನು ಸರ್ಕಾರಕ್ಕೆ ತಂದಿರುವರಾದರೂ ಸರ್ಕಾರಕ್ಕೆ ರೈತರ ಕೂಗು ಕೇಳಿಸುತ್ತಿಲ್ಲ ಎಂದು ವೇದಿಕೆ ಅಧ್ಯಕ್ಷರೂ ಆದ ಜಿಪಂ ಸದಸ್ಯ ಜಿ.ಆರ್.ಶಿವರಾಮಯ್ಯ ಆರೋಪಿಸಿದರು.
ಬಫರ್ ಡ್ಯಾಂನಿಂದ ಕೊರಟಗೆರೆ ತಾಲೂಕಿನ ವೀರಸಾಗರ, ಲಕ್ಕಮುತ್ತನಹಳ್ಳಿ, ಗೆದಮೇನಹಳ್ಳಿ, ಬೆಲ್ಲದಹಳ್ಳಿ, ಸುಂಕದಹಳ್ಳಿ ಪೂರ್ಣ ಮುಗಡೆಯಾಗಲಿದ್ದರೆ, ಚಿನ್ನಹಳ್ಳಿ, ಬೈರಗೊಂಡ್ಲು, ಬೂಚನಹಳ್ಳಿ ಭಾಗಶಃ ಮುಳಗಡೆಯಾಗಲಿವೆ. ಇನ್ನೂ ದೊಡ್ಡಬಳ್ಳಾಪುರ ತಾಲೂಕಿನ ಲೆಕ್ಕೆನಹಳ್ಳಿ, ಗರುಡಗಲ್ಲ ಪೂರ್ಣ ಮುಳಗಡೆ ಹೊಂದಲಿದ್ದರೆ ಮಚ್ಚೇನಹಳ್ಳಿ ಭಾಗಶಃ ಮುಳುಗಡೆಯಾಗುವ ಭೀತಿ ಎದುರಾಗಿದೆ. ರೈತರನ್ನು ಒಕ್ಕಲೆಬ್ಬಿಸುವ ಈ ಅಣೆಕಟ್ಟೆಯನ್ನು ಬೇರೆಡೆಗೆ ಸ್ಥಳಾಂತರಿಸುವಂತೆ ಆಗ್ರಹಿಸಿದರು.
ಈ ಹಿಂದೆ ಬಫರ್ ಡ್ಯಾಂ ಅನ್ನು ದೇವರಾಯನದುರ್ಗ ಕಣಿವೆ ಪ್ರದೇಶದಲ್ಲಿ ನಿರ್ಮಿಸಲು ಯೋಜಿಸಲಾಗಿತ್ತು. ಅದನ್ನು ಬದಲಿಸಿ ಹತ್ತಾರು ಹಳ್ಳಿಗಳು ಮುಳುಗಿಸಲು ಬೈರಗೊಂಡ್ಲು ಬಳಿ ಅಣೆಕಟ್ಟು ನಿರ್ಮಿಸಲು ಹೊರಟಿರುವುದು ಆತಂಕ ಸೃಷ್ಟಿಸಿದೆ. ಹಳ್ಳಿಗರನ್ನು ಒಕ್ಕಲೆಬ್ಬಿಸುವುದನ್ನು ಕೈಬಿಡಲಿ ಎಂದು ವೇದಿಕೆ ಪ್ರಧಾನ ಕಾರ್ಯದರ್ಶಿ ಚಿಕ್ಕತಿಮ್ಮಯ್ಯ ಒತ್ತಾಯಿಸಿದರು.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ: ಬೈರಗೊಂಡ್ಲು ಬಫರ್ ಡ್ಯಾಂ ನಿರ್ಮಾಣ ಕೈಬಿಡಬೇಕು. ಜನವಸತಿಯಲ್ಲದ ಪ್ರದೇಶದಲ್ಲಿ ಡ್ಯಾಂ ನಿರ್ಮಿಸಿ ರೈತ ಕುಟುಂಬಗಳನ್ನು ರಕ್ಷಿಸಬೇಕು ಎಂದು ಸರ್ಕಾರಕ್ಕೆ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್‌ಗೆ ಪ್ರತಿಭಟನಾನಿರತರು ಮನವಿ ಸಲ್ಲಿಸಿದರು. ಉಪಾಧ್ಯಕ್ಷ ವೆಂಕಟೇಶ್ ಮೂರ್ತಿ, ಸಿ.ಹೆಚ್.ಲಕ್ಷ್ಮಯ್ಯ, ಟಿ.ಟಿ.ರಂಗಯ್ಯ, ಜಿ.ಕೆ.ದೇವರಾಜು, ಎಲ್.ಎನ್.ಬೊಮ್ಮಯ್ಯ, ರಾಜಣ್ಣ, ಚಿಕ್ಕಲಿಂಗಯ್ಯ, ರಂಗಸ್ವಾಮಯ್ಯ, ಅರಸಪ್ಪ ಮತ್ತಿತರರು ಪ್ರತಿಭಟನೆ ನೇತೃತ್ವವಹಿಸಿದ್ದರು.
ಎತ್ತಿನಹೊಳೆ ಯೋಜನೆಗೆ ನಮ್ಮ ವಿರೋಧ ಇಲ್ಲ. ಜನವಸತಿ ಪ್ರದೇಶಗಳಲ್ಲಿ ಬಫರ್ ಡ್ಯಾಂ ನಿರ್ಮಿಸಲು ಉದ್ದೇಶಿಸಿರುವುದಕ್ಕೆ ನಮ್ಮ ಸಂಪೂರ್ಣ ವಿರೋಧ ಇದೆ. ಹತ್ತಾರು ಹಳ್ಳಿಗಳು ಮುಳಗಡೆಯಾಗಲಿದ್ದು, ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಬಗ್ಗೆ ಯೋಜನೆಯಲ್ಲಿ ಎಲ್ಲಿಯೂ ಸ್ಪಷ್ಟ ಭರವಸೆ ಕೊಟ್ಟಿಲ್ಲ. ಬೈರಗೊಂಡ್ಲು ಬಫರ್ ಡ್ಯಾಂಗೆ ಅವಕಾಶ ಕೊಡುವುದಿಲ್ಲ. ಜಿ.ಆರ್.ಶಿವರಾಮಯ್ಯ ಜಿಪಂ ಸದಸ್ಯ