ಅರಮನೆಮಕ್ಕಿ ಮೈದಾನದಲ್ಲಿ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ವಿರೋಧ

kls2 (4)
Published on

ಕಳಸ: ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ದೇಶಕ್ಕಾಗಿ ಬಳಕೆಯಾಗುತ್ತಿದ್ದ ಅರಮನೆಮಕ್ಕಿ ಮೈದಾನದ ಮೇಲೆ ಸರ್ಕಾರಿ ಕಟ್ಟಡ ನಿರ್ಮಾಣಕ್ಕೆ ಮುಂದಾಗಿರುವ ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರ ವಿರೋಧ ವ್ಯಕ್ತವಾಗಿದೆ.

ಅರಮನೆಮಕ್ಕಿ ಮೈದಾನ ಸ್ಥಳೀಯರ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ಮೈದಾನಕ್ಕೆ ಐತಿಹಾಸಿಕ ಹಿನ್ನಲೆಯೂ ಇದೆ. ಈ ಮೈದಾನದಲ್ಲಿ ಕಳಸ ಯುವಕ ಸಂಘದ ಕಟ್ಟಡ ಹಾಗೂ ಮುಂಭಾಗದಲ್ಲಿ ಬೃಹತ್ ವೇದಿಕೆಯನ್ನು ನಿರ್ಮಿಸಲಾಗಿದೆ. ಇಲ್ಲಿ ಮಾರಿ ಹಬ್ಬ, ಗಣೇಶೋತ್ಸವ, ಜಾತ್ರಾ ಸಂದರ್ಭದಲ್ಲಿ ಮನೋರಂಜನಾ ಕಾರ್ಯಕ್ರಮಗಳು, ಯಕ್ಷಗಾನ, ನಾಟಕ, ಕ್ರೀಡೆ ಮುಂತಾದ ಕಾರ್ಯಕ್ರಮ ನಡೆಯುತ್ತಿರುವ ಜತೆಗೆ ಹಲವಾರು ಸಾಂಸ್ಕೃತಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ವೇದಿಕೆಯಾಗಿದೆ. ಅಲ್ಲದೆ ಊರಿಗೆ ಇರುವ ಏಕೈಕ ಸಾರ್ವಜನಿಕ ಮೈದಾನವಾಗಿದೆ.

ಸರ್ಕಾರದ ಆದೇಶದ ಪ್ರಕಾರ ಈ ಮೈದಾನದಲ್ಲಿ ಎರಡು ಗುಂಟೆ ಭೂಮಿಯನ್ನು ಉಪಖಜಾನೆ ಅಧಿಕಾರಿಗಳ ಕಚೇರಿ ಕಟ್ಟಡದ ನಿರ್ಮಾಣದ ಉದ್ದೇಶಕ್ಕಾಗಿ ಈ ಭೂಮಿ ಕಾಯ್ದಿರಿಸಲಾಗಿದೆ. ಅಲ್ಲದೆ ಇದೇ ಭೂಮಿಯಲ್ಲಿ ನಾಡ ಕಚೇರಿ ರಾಜಸ್ವ ನಿರೀಕ್ಷಿಕರ ಹಾಗೂ ಗ್ರಾಮಲೆಕ್ಕಾಧಿಕಾರಿಗಳ ವಸತಿ ಗೃಹ ನಿರ್ಮಾಣದ ಉದ್ದೇಶಕ್ಕಾಗಿ 16 ಗುಂಟೆ ಮಂಜೂರಾಗಿದೆ.

ಅರಮನೆಮಕ್ಕಿ ಮೈದಾನದಲ್ಲಿ ಒಟ್ಟು 2 ಎಕರೆ 15ಗುಂಟೆ ಭೂಮಿ ಇದ್ದು, ಇದರಲ್ಲಿ ಈಗಾಗಲೇ ವಾಲ್ಮಿಕಿ ಸಭಾ ಭವನ, ಯುವಕ ಸಂಘ ಕಟ್ಟಡ, ವೇದಿಕೆ ಇದೆ. ಅಲ್ಲದೆ ಅಕ್ಕ ಪಕ್ಕ ಒಂದಷ್ಟು ಭೂಮಿ ಒತ್ತುವರಿಯಾಗಿದೆ. ಇದರಲ್ಲಿ ಸರ್ಕಾರಿ ಉಪ ಖಜಾನೆ, ಗ್ರಾಮಲೆಕ್ಕಾಧಿಕಾರಿಗಳ ವಸತಿ ಗೃಹ, ರಸ್ತೆಗಳನ್ನು ಕಳೆದರೆ ಉಳಿಯೋದು ಕೇವಲ 10 ಗುಂಟೆ ಭೂಮಿ ಮಾತ್ರ. ಈ ಭೂಮಿಯಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲ. ಸರ್ಕಾರದ ಈ ನಡೆಯನ್ನು ಸ್ಥಳೀಯ ನಾಗರಿಕರು ಮತ್ತು ಸಾಂಸ್ಕೃತಿಕ ಸಂಘಟನೆಗಳು ಈ ನಿರ್ಧಾರವನ್ನು ತೀವ್ರವಾಗಿ ವಿರೋಧಿಸುತ್ತಿವೆ. ಇಲ್ಲಿ ಯಾವುದೇ ಸರ್ಕಾರಿ ಕಟ್ಟಡವನ್ನು ಕಟ್ಟದೆ ನಮ್ಮ ಸಂಸ್ಕೃತಿಯ ಬೆಳವಣಿಗೆಗೆ ಆ ಮೈದಾನವು ಹೃದಯವಾಗಿದೆ. ಈ ಮೈದಾನ ಸಾರ್ವಜನಿಕ ಬಳಕೆಯ ಅರಮನೆಮಕ್ಕೆ ಮೈದಾನವಾಗಿಯೇ ಉಳಿಯಬೇಕು ಎಂಬುವುದು ಸಾರ್ವಜನಿಕರ ಅಭಿಪ್ರಾಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net