

ಜಯಪುರ: ಸ್ಥಳೀಯ ಗ್ರಾಪಂನ ಅಲಗೇಶ್ವರ ರಸ್ತೆ ಸಮೀಪದ ಸ್ಮಶಾನದಲ್ಲಿ ಯಾವುದೇ ಕಾಮಗಾರಿ ನಡೆಸದೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯದ ಆದೇಶ ಇದ್ದರೂ ಕಾಮಗಾರಿ ನಡೆಸಲಾಗುತ್ತಿದೆ ಎಂದು ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಕಾರ್ಮಿಕ ಮುಖಂಡ ಮುನಿಯಾಂಡಿ ದೂರಿದ್ದಾರೆ. ಜಯಪುರ ಗ್ರಾಪಂ ಸರ್ವೇ ನಂ.86ರಲ್ಲಿ ಅನಧಿಕೃತವಾಗಿ ರುದ್ರಭೂಮಿ ಮಾಡಲಾಗಿದ್ದು, ಇದರಿಂದ ಇಲ್ಲಿರುವ ಮನೆಗಳಿಗೆ ತೊಂದರೆಯಾಗುತ್ತಿದೆ. ಜಿಲ್ಲಾಧಿಕಾರಿ ರುದ್ರಭೂಮಿಗಾಗಿ ಸರ್ವೇ ನಂ.203ರಲ್ಲಿ 5 ಗುಂಟೆ ಜಾಗ ಮಂಜೂರು ಮಾಡಿದ್ದಾರೆ.
ಸಾರ್ವಜನಿಕರಿಗಾಗುತ್ತಿರುವ ತೊಂದರೆ ತಪ್ಪಿಸಲು ಸರ್ವೇ ನಂ.86ರಲ್ಲಿ ಅನಧಿಕೃತವಾಗಿ ನಿರ್ಮಿಸುತ್ತಿರುವ ರುದ್ರಭೂಮಿಯನ್ನು ಸರ್ವೇ ನಂ. 203ರಲ್ಲಿ ಸ್ಮಶಾನಕ್ಕಾಗಿ ಮಂಜೂರಾಗಿರುವ 5 ಗುಂಟೆ ಜಾಗಕ್ಕೆ ಸ್ಥಳಾಂತರ ಮಾಡಲು ಮನವಿ ಮಾಡಿದ್ದೆವು. ಈ ಕುರಿತು ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೊರೆ ಹೋಗಿದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ. ಪ್ರಕರಣ ಇತ್ಯರ್ಥವಾಗುವವರೆಗೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಆದೇಶಿಸಿದ್ದರೂ ಕಾಮಗಾರಿ ನಡೆಸಿದ್ದಲ್ಲದೆ, ನನಗೆ ತೊಂದರೆ ಕೊಡುವ ಸಲುವಾಗಿ ನನ್ನ ಮನೆಯ ಗೋಡೆಗೆ ಗ್ರಾಪಂನಿಂದ ಗೇಟ್ ಅಳವಡಿಸಿ ಪಕ್ಕದಲ್ಲಿ ಓಡಾಡದಂತೆ ಬೀಗ ಹಾಕಿದ್ದಾರೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ. ಘಟನೆ ಕುರಿತು ಕೊಪ್ಪ ತಹಸೀಲ್ದಾರ್ ಹಾಗೂ ಜಯಪುರ ಪೊಲೀಸರಿಗೆ ದೂರು ನೀಡಿದ್ದು, ನ್ಯಾಯಾಲಯದ ಆದೇಶದಂತೆ ವಿವಾದಿತ ಸ್ಮಶಾನದಲ್ಲಿ ಯಾವುದೇ ಹೊಸ ಕಾಮಗಾರಿ ನಡೆಸದಂತೆ ಕ್ರಮ ಕೈಗೊಳ್ಳಬೇಕು ಹಾಗೂ ಅಳವಡಿಸಿರುವ ಗೇಟ್ ತೆರವು ಮಾಡಿಸಬೇಕು ಎಂದು ಒತ್ತಾಯಿಸಿದ್ದಾರೆ.