ಅಮ್ಯೂಸ್ಮೆಂಟ್ ಪಾರ್ಕ್ ಮತ್ತೆ ವಿವಾದ: ಸರ್ಕಾರದ ನಿಲುವಿಗೆ ರೈತ ಹಿತರಕ್ಷಣಾ ಸಮಿತಿ ಆಕ್ಷೇಪ

Opposition to construction of amusement park Mandya
Published on

ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಯೋಜನೆಗೆ ಸಂಬಂಧಿಸಿದಂತೆ ವಾಹನ ಪಾರ್ಕಿಂಗ್‌ಗೆಂದು ರೈತರ 24 ಎಕರೆ ಜಮೀನು ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ಕೆರಳಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಈ ಜನವಿರೋಧಿ ಯೋಜನೆ ಕೈಬಿಡದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.

ಈ ಸಂಬಂಧ ಜಿಲ್ಲಾಧಿಕಾರಿ ಡಾ.ಕುಮಾರ ಅವರನ್ನು ಭೇಟಿ ಮಾಡಿದ ಸಮಿತಿಯ ಸದಸ್ಯರು, ಯೋಜನೆಯಿಂದ ರಾಜ್ಯ ಸರ್ಕಾರ ಹಿಂದೆ ಸರಿಯುವಂತೆ ಆಗ್ರಹಿಸಿದ್ದಾರೆ. ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಮಾತನಾಡಿ, ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದ ವಾಹನ ಪಾಕಿರ್ಂಗ್‌ಗೆ ರೈತರ 24 ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಭೆ ನಡೆಸಿ, ತೀರ್ಮಾನಿಸಿರುವುದಕ್ಕೆ ರೈತರ ಮತ್ತು ಪ್ರಗತಿಪರ ಸಂಘಟನೆಗಳ ವಿರೋಧವಿದೆ. ಈಗಾಗಲೇ ಯೋಜನೆ ವಿರೋಧಿಸಿ ಸಂಬಂಧಪಟ್ಟವರಿಗೆ ಪತ್ರ ನೀಡಲಾಗಿದೆ. ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಯೋಜನೆಯಿಂದ ಅಣೆಕಟ್ಟೆ, ಪರಿಸರ, ರೈತರು, ಡ್ಯಾಂ ವ್ಯಾಪ್ತಿಯ ಗ್ರಾಮಕ್ಕೆ ಧಕ್ಕೆಯಾಗುವುದರ ಜತೆಗೆ ಕೃಷಿ ಬದುಕು ಪಲ್ಲಾಟವಾಗುತ್ತದೆ ಎಂದು ಕಿಡಿಕಾರಿದರು.

ಈ ಯೋಜನೆಯಿಂದ ಕೆ.ಆರ್.ಎಸ್. ಪ್ರದೇಶದ ಯುವ ಸಮೂಹಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 120 ವರ್ಷದ ಅಣೆಕಟ್ಟಿನ ಭದ್ರತೆಗೆ ನೇರ ಪರಿಣಾಮವಾಗುತ್ತದೆ. ಕೃಷಿ ಬದುಕು ನಾಶವಾಗುತ್ತದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಅನೇಕ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ. ಅಣೆಕಟ್ಟಿನ ಬಳಿ ಯಾವುದೇ ದಟ್ಟಣೆಯ ಸಾರ್ವಜನಿಕ ಚಟುವಟಿಕೆಗಳು ನಡೆಯಬಾರದು. ದಟ್ಟಣೆಯ ವಾಹನಗಳ ಪ್ರವೇಶದಿಂದ ಅಮ್ಲಜನಕ ಉತ್ಪಾದನೆಗೆ ತಡೆಯಾಗುತ್ತದೆ. ಹಸಿರು ವಲಯ ನಾಶವಾಗುತ್ತದೆ. ಈ ಸಂಬಂಧ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ವಾಹನಗಳ ಪಾಕಿರ್ಂಗ್ ವ್ಯವಸ್ಥೆ ಯೋಜನೆಯನ್ನು ಕೈಬಿಡಲು ಒತ್ತಾಯಿಸುತೇವೆ ಎಂದು ಆಗ್ರಹಿಸಿದರು.

ರೈತರ ಆರ್ಥಿಕ ಜೀವನಾಡಿ ಮೈಷುಗರ್ ಕಾರ್ಖಾನೆಯನ್ನು 2025ನೇ ಸಾಲಿನ ಜೂನ್ ಮೊದಲ ವಾರವೇ ಆರಂಭಮಾಡಿ, ರೈತರ ಕಬ್ಬನ್ನು ಸಮರ್ಪಕವಾಗಿ ನುರಿಸಿ, ಯಾವುದೇ ತೊಂದರೆ ಆಗದಂತೆ ರೈತರ ಹಿತಕಾಯಬೇಕು. ಮೈಷುಗರ್ ವ್ಯಾಪ್ತಿಯಲ್ಲಿ ಹೆಚ್ಚು ಕಬ್ಬನ್ನು ಬೆಳೆಯಲಾಗಿದೆ, ಸುಮಾರು 4.5 ಲಕ್ಷ ಟನ್ ಕಬ್ಬನ್ನು ಒಪ್ಪಿಗೆ ಮಾಡಿಕೊಂಡಿರುವ ಮಾಹಿತಿ ಇದೆ, ರೈತರ ಅನುಕೂಲಕ್ಕಾಗಿ ಬಹುಬೇಗ ಕಾರ್ಖಾನೆ ಆರಂಭವಾಗಿ, ಕಬ್ಬು ನುರಿಸಲಿ, ವಿಳಂಭನೀತಿ ಅನುಸರಿಬಾರದು ಎಂದು ಒತ್ತಾಯಿಸುತ್ತೇವೆ. ಕಳೆದ ಬಾರಿ 2 ಸಾಲಿನಲ್ಲಿ ಕಬ್ಬು ಆರೆಯುವಿಕೆ ವಿಳಂಭವಾಗಿದೆ, ರೈತರಿಗೆ ನಷ್ಟವಾಗಿದೆ, ಎಚ್ಚು ಕಬ್ಬನ್ನು ನುರಿಸಲಿಕ್ಕೆ ಆಗಲಿಲ್ಲ, ಎರಡು ಸರ್ಕಾರಗಳು ಹೆಚ್ಚಿನ ಮಟ್ಟದಲ್ಲಿ ಹಣಸಹಾಯ ಮಾಡಿದ್ದರೂ ಸಹ ಕಾರ್ಖಾನೆಯ ತಾಂತ್ರಿಕ ವಿಷಯದಲ್ಲಿ ಸಿದ್ಧತೆಯಾಗಿರುವ ಬಗ್ಗೆ ಮಾಹಿತಿ ರೈತರಿಗೆ ತಿಳಿಸಬೇಕಿತ್ತು ಎಂದು ಕಿಡಿಕಾರಿದರು.

ರೈತರು ಮತ್ತು ಸಂಘಟನೆ ಮುಖಂಡರು ಕಾರ್ಖಾನೆ ಬಂದು ಅಧ್ಯಕ್ಷರೊಂದಿಗೆ ಚರ್ಚಿಸಲು ಸಿದ್ಧವಿದ್ದೇವೆ, ಕಾರ್ಖಾನೆಯನ್ನು ವೀಕ್ಷಣೆ ಮಾಡಲಿದ್ದೇವೆ. ಅಧ್ಯಕ್ಷರು ವಿಳಂಭ ಮಾಡಬಾರದು. ಪ್ರತಿ ಟನ್ ಕಬ್ಬಿಗೆ 4,500 ರೂ ನೀಡುವಂತೆ ಹಲವು ವರ್ಷಗಳಿಂದ ಒತ್ತಾಯಿಸಿಕೊಂಡು ಬರುತ್ತಿದ್ದೇವೆ. ರಾಜ್ಯ ಸರ್ಕಾರ ಇದರತ್ತ ಗಮನ ನೀಡಲಿ. ಸ್ವಾಮಿನಾಥನ್ ವರದಿ ಪ್ರಕಾರ ಬೆಲೆ ನಿಗದಿ ಮಾಡಲಿ ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ದಸಂಸ ಎಂ.ವಿ.ಕೃಷ್ಣ, ಮುದ್ದೇಗೌಡ, ಶಿವಳ್ಳಿ ಚಂದ್ರಶೇಖರ್, ಬಾಲಚಂದ್ರ, ಪ್ರಕಾಶ್, ನಾಗರಾಜು, ನಾರಾಯಣಸ್ವಾಮಿ, ಕಮಲಾ, ತನುಜಾ, ಸತ್ಯಭಾಮ, ಕೃಷ್ಣೇಗೌಡ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net