

ಮೈಸೂರು: ಜಾತಿ ಗಣತಿ ವರದಿಯಲ್ಲಿ ಏನಿದೆ ಎಂದು ತಿಳಿಯದೆ ಸುಖಾಸುಮ್ಮನೆ ಊಹಾಪೋಹಗಳೊಂದಿಗೆ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರು ವರದಿ ಸಲ್ಲಿಸಿದ್ದರೂ ಅದರಲ್ಲಿ ಏನಿದೆ ಎನ್ನುವುದು ಇನ್ನೂ ಬಹಿರಂಗಗೊಂಡಿಲ್ಲ. ಆದರೂ ಬಿಜೆಪಿಯವರು ಸುಖಾಸುಮ್ಮನೆ ಊಹಾಪೋಹದ ಮೂಲಕ ಆರೋಪ ಮಾಡುತ್ತಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಾತಿ ಗಣತಿ ವರದಿ ಬಿಡುಗಡೆ ಬೇಡ ಎಂದು ಬಿಜೆಪಿಯವರು ವಿರೋಧ ವ್ಯಕ್ತಪಡಿಸುತ್ತಿರುವುದು ವಿರೋಧ ಭಾಸವಾಗಿದೆ. ಬಿಜೆಪಿ ಕೊಟ್ಟ ಮಾನದಂಡಗಳ ಆಧಾರದ ಮೇಲೆ ಈ ವರದಿ ತಯಾರಿಸಲಾಗಿದೆ. ನಾಡಿನ ಎಲ್ಲ ವರ್ಗದವರಿಗೂ ಅನುಕೂಲವಾಗುವಂತೆ ಇದ್ದರೂ, ವಿರೋಧಿಸುವುದನ್ನು ಗಮನಿಸಿದರೆ ಬಿಜೆಪಿಯವರು ಅಹಿಂದ ವಿರೋಧಿಗಳು ಎನ್ನುವುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ಅರಿಯಲು ಈ ವರದಿ ಅನುಕೂಲ ಆಗಲಿದೆ. ಬಿಜೆಪಿ ವಿರೋಧ ಮಾಡಿ ಹಿಂದುಳಿದ ವರ್ಗಗಳ ಸಮುದಾಯಗಳಿಗೆ ಬೆಂಕಿ ಹಾಕುವ ಕೆಲಸ ಮಾಡುತ್ತಿದೆ. ಇದನ್ನೇ ಮುಂದಿಟ್ಟುಕೊಂಡು ರಾಜಕೀಯ ಮಾಡಿ ಜನರಿಗೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಾರೆ ಎಂದು ಕಿಡಿಕಾರಿದರು.
ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದ್ದಾರೆ ಎಂದು ಬಿಜೆಪಿಯವರು ಬಟ್ಟೆ ಬಿಚ್ಚಿಕೊಂಡು ಕೂಗಾಡಿದರು. ಸಣ್ಣ ವಿಚಾರವನ್ನೇ ದೊಡ್ಡದಾಗಿ ಮಾಡಿ ಅಲ್ಲೋಲ, ಕಲ್ಲೋಲ ಮಾಡಿದರು. ಆದರೆ ಏನು ಘೋಷಣೆ ಕೂಗಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಹೇಳಿಲ್ಲ ಎಂದರು.
ಚುನಾವಣೆಗೋಸ್ಕರ ಬಿಜೆಪಿ ಇಂತಹ ವಿಚಾರಗಳನ್ನು ಇಟ್ಟುಕೊಂಡು ಎಂತಹ ಕೀಳು ಮಟ್ಟಕ್ಕಾದರೂ ಇಳಿಯುತ್ತಾರೆ. ಎಸ್‌ಎಫ್‌ಎಲ್ ವರದಿಗೆ ಹೋಗಿದೆ. ವರದಿ ಬಂದ ಮೇಲೆ ಸತ್ಯ ಹೊರಬಲಿದೆ. ಇದೆಲ್ಲವನ್ನೂ ಬಿಜೆಪಿ ಬೇಕಂತಲೇ ವಿವಾದಗಳನ್ನ ಸೃಷ್ಟಿಸಿ ಜನರಲ್ಲಿ ಭಾವನಾತ್ಮಕ ವಿಚಾರ ತಂದು ರಾಜಕೀಯ ಮಾಡಲು ಹೋಗುತ್ತಿದ್ದಾರೆ. ನಿಜವಾದ ದೇಶ ದ್ರೋಹಿಗಳು ಬಿಜೆಪಿಯವರು ವಾಗ್ದಾಳಿ ನಡೆಸಿದರು.
15 ವರ್ಷಗಳ ಬಳಿಕ ವಿದ್ಯುತ್ ದರ ಕಡಿಮೆಯಾಗಿದೆ. ಬಿಜೆಪಿ ಅಧಿಕಾರದ ಅವಧಿಯಲ್ಲಿ 9 ಬಾರಿ ವಿದ್ಯುತ್ ದರ ಏರಿಕೆಯಾಗಿತ್ತು. ಈಗ ನಾವು ಹೆಮ್ಮೆಯಿಂದ ಹೇಳುತ್ತಿದ್ದೇವೆ. ಗೃಹಜ್ಯೋತಿ ಯೋಜನೆ ಅಡಿ ಉಚಿತವಾಗಿ ವಿದ್ಯುತ್ ಕೊಟ್ಟರೂ ಕೂಡ ಈಗ ವಿದ್ಯುತ್ ದರ ಕಡಿಮೆ ಮಾಡಲಾಗಿದೆ. ಇಂತಹ ಒಂದು ಪರಿಸ್ಥಿತಿಯಲ್ಲೂ ವಿದ್ಯುತ್ ದರ ಕಡಿಮೆ ಮಾಡದಿರುವುದು ನಮ್ಮ ಹೆಮ್ಮೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಕಾರ್ಯದರ್ಶಿ ಎಂ.ಶಿವಣ್ಣ, ಜಿಲ್ಲಾ ವಕ್ತಾರ ಮಹೇಶ್ ಇತರರು ಇದ್ದರು.