ರಾಜ್ಯದಲ್ಲಿ ಎನ್‌ಇಪಿ ರದ್ದತಿಗೆ ವಿರೋಧ

ckm nep
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರಿಗೆ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು. ಜಿಪಂ ಸಿಇಒ ಗೋಪಾಲಕೃಷ್ಣ ಇದ್ದರು.
Published on

ಚಿಕ್ಕಮಗಳೂರು: ನೂತನ ಶಿಕ್ಷಣ ಪದ್ಧತಿ (ಎನ್‌ಇಪಿ) ರಾಜ್ಯದಲ್ಲಿ ರದ್ದುಗೊಳಿಸಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಎಬಿವಿಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಮೂಲಕ ಸರ್ಕಾರಕ್ಕೆ ಬುಧವಾರ ದೂರು ಸಲ್ಲಿಸಿದರು.

ನಗರ ಕಾರ್ಯದರ್ಶಿ ರಾಕೇಶ್ ಮರಡಿ ಮಾತನಾಡಿ, ದೇಶದಲ್ಲಿ ಬ್ರಿಟಿಷ್ ವಸಾಹತುಶಾಹಿ ಶಿಕ್ಷಣ ಪದ್ಧತಿ ಚಾಲ್ತಿಯಲ್ಲಿದೆ. ಇಂಥ ಟೀಕೆಗಳ ನಡುವೆಯೇ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಕಾಲಕ್ಕೆ ತಕ್ಕಂತೆ ಶಿಕ್ಷಣದ ಬಗ್ಗೆ ಬೋಧನೆ ಮಾಡಬೇಕಾದ ಅವಶ್ಯಕತೆಯಿದೆ ಎಂದು ಹೇಳಿದರು.
ಎನ್‌ಇಪಿ ವಿದ್ಯಾರ್ಥಿ ಕೇಂದ್ರಿತವಾಗಿದ್ದು, ಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ಸಾಂಸ್ಕೃತಿಕವಾಗಿ ಸ್ಥಳೀಯ ಭಾಷೆಗಳ ಅಭಿವೃದ್ಧಿಗೆ ಸೂಕ್ತ ಮಾನ್ಯತೆ ನೀಡಿದೆ. ಇದನ್ನು ಸರ್ಕಾರ ಅಧ್ಯಯನ ಮಾಡಲಿ ಎಂದರು.
ಚುನಾವಣಾ ಪ್ರಣಾಳಿಕೆಯಲ್ಲಿಯೇ ಎನ್‌ಇಪಿ ರದ್ದತಿ ಬಗ್ಗೆ ಹೇಳಿದ್ದೇವೆ ಎನ್ನುವವರು ಯಾವ ಶಿಕ್ಷಣ ತಜ್ಞರ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ? ಮುಂಬರುವ ದಿನಗಳಲ್ಲಿ ಐಐಟಿ, ಐಐಎಂ, ಐಐಎಸ್‌ಸಿ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಲಾರಂಭಿಸಿದಾಗ ಕರ್ನಾಟಕದ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.
ಎನ್‌ಇಪಿ ರದ್ದತಿ ನಿಲುವು ರಾಜ್ಯದ ವಿದ್ಯಾರ್ಥಿಗಳ ಭವಿಷ್ಯವನ್ನು ಕತ್ತಲೆಗೆ ದೂಡುವ ಪ್ರಯತ್ನ ಸರ್ಕಾರದಿಂದ ನಡೆಯುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ ಎನ್‌ಇಪಿ ರದ್ದುಗೊಳಿಸುವನೆಂದು ಹೇಳಿಕೊಳ್ಳುತ್ತಿರುವವರು ಅದನ್ನು ರೂಪಿಸಿದವರ ಜತೆಯಲ್ಲಿ ಚರ್ಚಿಸಿ ನಂತರ ತೀರ್ಮಾನಿಸಬೇಕಾಗಿತ್ತು ಎಂದರು.
ಜಿಪಂ ಸಿಇಒ ಗೋಪಾಲಕೃಷ್ಣ, ರಾಜ್ಯ ಕಾರ್ಯಕಾರಿಣಿ ಸದಸ್ಯೆ ನಿಹಾರಿಕಾ, ಪದಾಧಿಕಾರಿಗಳಾದ ನಂದನ್, ಪ್ರೇಕ್ಷಿತ್, ಮಧು, ಧನುಷ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net