ಜನೌಷಧ ಕೇಂದ್ರ ನಿಷೇಧಕ್ಕೆ ವಿರೋಧ

janavsadha kendra
Published on

 ಕೋಲಾರ: ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಸ್ಥಾಪಿಸಲಾಗಿರುವ ಜನೌಷಧ ಕೇಂದ್ರಗಳನ್ನು ತೆರವುಗೊಳಿಸುವಂತೆ ಆದೇಶಿಸಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ, ಬಿಜೆಪಿ ಕಾರ್ಯಕರ್ತರು ನಗರದ ಎಸ್​ಎನ್​ಆರ್​ ಆಸ್ಪತ್ರೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರವು ಅಧಿಕಾರಕ್ಕೆ ಬಂದಾಗಿನಿಂದ ಜನರ ಮೇಲೆ ಗದಾಪ್ರಹಾರ ನಡೆಸುತ್ತಿದೆ. ಬಡವರಿಗೆ ರಿಯಾಯಿತಿ ದರದಲ್ಲಿ ಔಷಧ ಕಲ್ಪಿಸುತ್ತಿದ್ದ ಮಳಿಗೆಗಳನ್ನು ಮುಚ್ಚಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ದೂರಿದರು.

ಸಿಎಂ ಸಿದ್ದರಾಮಯ್ಯ, ಸಚಿವ ದಿನೇಶ್​ ಗುಂಡೂರಾವ್​ ಅವರಿಗೆ ಬಡವರ ಬಗ್ಗೆ ಕಾಳಜಿ ಇದಿದ್ದರೆ ಜನೌಷಧ ಕೇಂದ್ರಗಳನ್ನು ಮುಚ್ಚಿಸುತ್ತಿರಲಿಲ್ಲ. ಒಂದು ಸರ್ಕಾರಿ ಆಸ್ಪತ್ರೆಯಲ್ಲಿ ಜನರಿಗೆ ಬೇಕಾಗಿರುವ ಔಷಧಗಳನ್ನು ಒದಗಿಸುವಲ್ಲಿ ಸರ್ಕಾರ ಸಂಪೂರ್ಣ ವಿಲವಾಗಿದ್ದಾರೆ ಎಂದು ಆರೋಪಿಸಿದರು.

ದೇಶದಲ್ಲಿ ಸುಮಾರು 15,000 ಜನೌಷಧಗಳು ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, 30 ಸಾವಿರ ಕೋಟಿಯಷ್ಟು, 1,541 ಕೇಂದ್ರಗಳಿಂದ 4 ರಿಂದ 5 ಲಕ್ಷ ಜನ ಆರೋಗ್ಯ ಉಳಿಸಿಕೊಂಡಿದ್ದಾರೆ. ಬಿಟ್ಟಿ ಭಾಗ್ಯಗಳಿಂದ ಸರ್ಕಾರವು ಜನರನ್ನು ಯಾಮಾರಿಸಿ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಫ್ರೀ ಬಸ್​ ಸಂಚಾರ ಕಲ್ಪಿಸುವುದಾಗಿ ಹೇಳಿ ಬಸ್​ಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಸ್ಕಾಂ ಸೇರಿ ಎಲ್ಲ ಇಲಾಖೆಗಳಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಉಳ್ಳವರನ್ನು ಬಿಟ್ಟು ಬಡವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಆಸ್ಪತ್ರೆಗಳ ಆವರಣದಲ್ಲಿ ಜನೌಷಧ ಕೇಂದ್ರಗಳನ್ನು ತೆರೆದಿರುವುದು ಕೇಂದ್ರ ಸರ್ಕಾರ. ಇದನ್ನು ರಾಜ್ಯ ಸರ್ಕಾರವು ಉದ್ದೇಶ ಪೂರ್ವಕವಾಗಿಯೇ ಮುಚ್ಚಿಸಿ ಆದೇಶಿಸಿದೆ. ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಹೊರಗಡೆಗೆ ಚೀಟಿಗಳನ್ನು ಬರೆದುಕೊಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ದಿನೇಶ್​ ಗುಂಡೂರಾವ್​, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ ಮೆಡಿಕಲ್​ ಮಾಫಿಯ ಒತ್ತಡಕ್ಕೆ ಮಣಿದು, ಮೋದಿ ಅವರು ಜನರಿಗಾಗಿ ತೆಗೆದಿರುವ ಔಷಧ ಕೇಂದ್ರಗಳನ್ನು ಮುಚ್ಚಿಸುವ ಕೆಲಸ ಮಾಡಿರುವುದು ಹೇಯ ಕೃತ್ಯ. ಈ ಆದೇಶವನ್ನು ಕೂಡಲೇ ಹಿಂಪಡೆಯಬೇಕು, ಇಲ್ಲದಿದ್ದರೆ ತೀವ್ರ ಹೋರಾಟ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಆಂಧ್ರಪ್ರದೇಶ, ಕೇರಳ, ತಮಿಳುನಾಡು ಸಿಎಂಗಳು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿ ಪರಿಹಾರ ಬಿಡುಗಡೆ ಮಾಡಿಸಿಕೊಂಡು ಬರುತ್ತಾರೆ. ಅವರಿಗೆ ಇರುವ ಕಾಳಜಿ ನಿಮಗಿಲ್ಲವೆ. ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ಅವರು ರಾಜ್ಯಕ್ಕೆ 4,500 ಇವಿ ಬಸ್​ ನೀಡಲಾಗುವುದು ಎಂದು ಘೋಷಣೆ ಮಾಡಿದ್ದು, ಸೌಜನ್ಯಕ್ಕಾದರೂ ಅಭಿನಂದನೆ ತಿಳಿಸುವ ಆಲೋಚನೆಯಿಲ್ಲವೆ, ಅದನ್ನೂ ಟೀಕಿ ಮಾಡ್ತಿರಾ ಎಂದು ಪ್ರಶ್ನಿಸಿದರು.

ಪ್ರತಿಭಟನೆಯಲ್ಲಿ ವಕ್ತಾರ ಎಸ್​.ಬಿ.ಮುನಿವೆಂಟಪ್ಪ, ಮುಖಂಡರಾದ ವಿಜಯ್​ಕುಮಾರ್​, ರಾಜೇಶ್​ ಸಿಂಗ್​, ಕೆಂಬೋಡಿ ನಾರಾಯಣಸ್ವಾಮಿ, ಮಮತಾ, ಅರುಣ, ಸತೀಶ್​, ತಿಮ್ಮರಾಯಪ್ಪ, ರಾಮಚಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net