ಅಮ್ಯೂಸ್ಮೆಂಟ್ ಪಾರ್ಕ್ ರೈತರ ಶಾಕ್: ರಾಜ್ಯಸರ್ಕಾರದ ವಿರುದ್ಧ ಪ್ರತಿಭಟನೆಗೆ ರೂಪುರೇಷೆ

Opposition to Amusement Park Project Mandya
Published on

ಮಂಡ್ಯ: ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣ ಮಾಡಬೇಕೆನ್ನುವ ರಾಜ್ಯಸರ್ಕಾರದ ನಿರ್ಧಾರದ ವಿರುದ್ಧ ಹೋರಾಟಕ್ಕೆ ರೈತರು ಸಜ್ಜಾಗುತ್ತಿದ್ದಾರೆ. ಇದರ ಪೂರ್ವಭಾವಿಯಾಗಿ ಜ.28ರಂದು ಪೂರ್ವಭಾವಿ ಸಭೆ ಆಯೋಜಿಸಲಾಗಿದೆ.

ಬೃಂದಾವನದಲ್ಲಿ ಸಾರ್ವಜನಿಕ-ಖಾಸಗಿ(ಪಿಪಿಪಿ) ಸಹಭಾಗಿತ್ವದಲ್ಲಿ 2663.75 ಕೋಟಿ ರೂ ವೆಚ್ಚದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಮಾದರಿಯಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಆಕರ್ಷಣೀಯ ಕೇಂದ್ರವನ್ನಾಗಿ ಉನ್ನತೀಕರಣಗೊಳಿಸುವ ಯೋಜನೆಗೆ ರಾಜ್ಯಸರ್ಕಾರ ಈಗಾಗಲೇ ಅನುಮೋದನೆ ನೀಡಿದೆ. ಆದರೆ ಈ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರತಿಭಟನೆಗೆ ರೂಪುರೇಷೆಯೂ ಸಿದ್ಧವಾಗುತ್ತಿದೆ.

ಏನಿದು ಯೋಜನೆ?: ಕೃಷ್ಣರಾಜಸಾಗರ ಜಲಾಶಯದ ಕೆಳಭಾಗದಲ್ಲಿನ 198 ಎಕರೆ ಜಾಗದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ಮಾದರಿಯಲ್ಲಿ ಉದ್ಯಾನದ ಅಭಿವೃದ್ಧಿ, ಸೌಂದರ್ಯೀಕರಣ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳುವ ಈ ಬೃಹತ್ ಯೋಜನೆಗೆ ಆರ್ಥಿಕ ಇಲಾಖೆ, ಯೋಜನಾ ಇಲಾಖೆ, ಮೂಲಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಗಳು ನೀಡಿರುವ ಅಭಿಪ್ರಾಯ ಹಾಗೂ ಸಚಿವ ಸಂಪುಟದ ನಿರ್ಣಯದನ್ವಯ ಅನುಮೋದನೆ ನೀಡಲಾಗಿದೆ.

ಇದಲ್ಲದೆ ನಾಲ್ಕೂವರೆ ವರ್ಷಗಳ ನಿರ್ಮಾಣ ಅವಧಿ ಹಾಗೂ ನಂತರದ 30 ವರ್ಷಗಳ ನಿರ್ವಹಣಾ ಅವಧಿ ಒಳಗೊಂಡಂತೆ ಒಟ್ಟು 34.5 ವರ್ಷಗಳ ಗುತ್ತಿಗೆ ಅವಧಿಯ ಪ್ರಸ್ತಾವವಿದ್ದು, ಮೂರು ಹಂತಗಳಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ. ಈ ಯೋಜನೆಯಡಿ ಬೊಟಾನಿಕಲ್ ಉದ್ಯಾನ, ಜಂಗಲ್ ಬೋಟ್‌ರೈಡ್, ಮೀನಾ ಬಜ್ಹಾರ್, ಡಾಲ್ ಮ್ಯೂಸಿಯಂ, ಫುಡ್ ಫ್ಲಾಜಾ, ವಾಟರ್ ಪಾರ್ಕ್, ಲೇಸರ್ ಫೌಂಟೇನ್ ಶೋ, ಹೆಲಿಪ್ಯಾಡ್, ಜೈ ಹೋ ಫೌಂಟೇನ್, ಬಲೂನ್ ರೈಡ್, ವಾಟರ್ ಪ್ಲೇನ್ ಮತ್ತು ಪ್ಯಾರಾಸೈಲಿಂಗ್, ಟೆಕ್ನೋ ಪಾರ್ಕ್, ಅರೋಮಾ ಗಾರ್ಡನ್, ಟ್ರೀ ವಾಕ್, ವಾಕ್ಸ್ ಆ್ಯಂಡ್ ಹಿಸ್ಟೋರಿಕಲ್ ಮ್ಯೂಸಿಯಂ, ಸ್ಕೈ ಬ್ರಿಡ್ಜ್, ಇಂಡೋರ್ ಅಮ್ಯೂಸ್‌ಮೆಂಟ್ ಪಾರ್ಕ್, ಪೆಂಗ್ವಿನ್ ಝೂ, ಜಂಗಲ್ ಪಾರ್ಕ್, ವಿಶಾಲವಾದ ವಾಹನಗಳ ನಿಲುಗಡೆ ಸ್ಥಳ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ.

Opposition to Amusement Park Project

ಯೋಜನೆ ಕುರಿತು ರೈತರು ಹೇಳೋದೇನು?

ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆಯ ಬೃಂದಾವನದಲ್ಲಿ ಅಮ್ಯೂಸ್ಮೆಂಟ್ ಪಾರ್ಕ್ ನಿರ್ಮಾಣದ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಯೋಜನೆಗೆ ಸಂಬಂಧಿಸಿದಂತೆ ವಾಹನ ಪಾರ್ಕಿಂಗ್‌ಗೆಂದು ರೈತರ 24 ಎಕರೆ ಜಮೀನು ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡುತ್ತಿದ್ದಂತೆ ಕೆರಳಿರುವ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ, ಈ ಜನವಿರೋಧಿ ಯೋಜನೆ ಕೈಬಿಡದಿದ್ದರೆ ಹೋರಾಟ ನಡೆಸುವ ಎಚ್ಚರಿಕೆ ನೀಡಿದೆ.

ಯೋಜನೆಯಿಂದ ಅಣೆಕಟ್ಟೆ, ಪರಿಸರ, ರೈತರು, ಡ್ಯಾಂ ವ್ಯಾಪ್ತಿಯ ಗ್ರಾಮಕ್ಕೆ ಧಕ್ಕೆಯಾಗುವುದರ ಜತೆಗೆ ಕೃಷಿ ಬದುಕು ಪಲ್ಲಾಟವಾಗುತ್ತದೆ. ಕೆ.ಆರ್.ಎಸ್ ಪ್ರದೇಶದ ಯುವ ಸಮೂಹಗಳ ಬದುಕಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 120 ವರ್ಷದ ಅಣೆಕಟ್ಟಿನ ಭದ್ರತೆಗೆ ನೇರ ಪರಿಣಾಮವಾಗುತ್ತದೆ. ಕೃಷಿ ಬದುಕು ನಾಶವಾಗುತ್ತದೆ. ಪ್ರವಾಸೋದ್ಯಮದ ಹೆಸರಿನಲ್ಲಿ ಅನೇಕ ಕೆಟ್ಟ ಪರಿಣಾಮಗಳು ಉಂಟಾಗುತ್ತದೆ. ಅಣೆಕಟ್ಟಿನ ಬಳಿ ಯಾವುದೇ ದಟ್ಟಣೆಯ ಸಾರ್ವಜನಿಕ ಚಟುವಟಿಕೆಗಳು ನಡೆಯಬಾರದು. ದಟ್ಟಣೆಯ ವಾಹನಗಳ ಪ್ರವೇಶದಿಂದ ಅಮ್ಲಜನಕ ಉತ್ಪಾದನೆಗೆ ತಡೆಯಾಗುತ್ತದೆ. ಹಸಿರು ವಲಯ ನಾಶವಾಗುತ್ತದೆ. ಈ ಸಂಬಂಧ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಹಾಗೂ ವಾಹನಗಳ ಪಾಕಿರ್ಂಗ್ ವ್ಯವಸ್ಥೆ ಯೋಜನೆಯನ್ನು ಕೈಬಿಡಬೇಕೆನ್ನುವುದು ರೈತರ ಆಗ್ರಹ.

ಟೆಂಡರ್‌ದಾರರ ಅನುಮಾನ ನಡೆ? ಯೋಜನೆಗೆ ಸಂಬಂಧಿಸಿದಂತೆ ಕಾವೇರಿ ನೀರಾವರಿ ನಿಗಮ ಈಗಾಗಲೇ ಎರಡು ಸಲ ಟೆಂಡರ್ ಕರೆಯುವುದರ ಜತೆಗೆ ಹೆಚ್ಚುವರಿ ದಿನಗಳನ್ನು ವಿಸ್ತರಣೆ ಮಾಡಿದರೂ ಉದ್ಯಮಿಗಳು ಆಸಕ್ತಿ ತೋರುತ್ತಿಲ್ಲ. 2024 ಸೆ.12ರಿಂದ ನ.11 ರವರೆಗೆ ಮೊದಲು ಮತ್ತು 2024 ಡಿ.2ರಿಂದ 2025 ಜ.16ವರೆಗೆ ಎರಡನೇ ಬಾರಿ ಟೆಂಡರ್ ಕರೆಯಲಾಗಿತ್ತು. ಆದರೆ ಯಾವುದೇ ಉದ್ಯಮಿಗಳು ಭಾಗವಹಿಸದ ಹಿನ್ನಲೆಯಲ್ಲಿ ಜ.23 ರವರೆಗೆ ವಿಸ್ತರಣೆ ಮಾಡಲಾಗಿತ್ತು. ಇನ್ನೊಂದೆಡೆ ಈ ಬಗ್ಗೆ ಸಾಕಷ್ಟ ಅನುಮಾನವೂ ಇದೆ. ಕಾರಣ, ಟೆಂಡರ್‌ನಲ್ಲಿ ಉದ್ಯಮಿಗಳು ಭಾಗವಹಿಸದಿರುವ ಹಿಂದೆ ಪ್ರಭಾವಿಗಳ ಕೈವಾಡವಿದೆ ಎಂಬುದಿದೆ. ಗುತ್ತಿಗೆ ಅವಧಿಗೆ ಹೆಚ್ಚು ಮಾಡುವಂತೆ ಅಥವಾ ಗುತ್ತಿಗೆ ಷರತ್ತು ಸಡಿಲಿಸಲು ಮಾಡುತ್ತಿರುವ ಜಾಣ ನಡೆ ಎನ್ನುವುದಿದೆ.

ಈ ಯೋಜನೆಯಿಂದ ಅಣೆಕಟ್ಟೆ ಭದ್ರತೆ ಹಾಗೂ ಕಾನೂನಿಗೆ ವಿರೋಧವಾಗಿದೆ. ಮಾತ್ರವಲ್ಲದೆ ಪರಿಸರ ಮಾಲಿನ್ಯ ಉಂಟಾಗಲಿದ್ದು, ನದಿ ನೀರು ಕಲುಷಿತಗೊಳ್ಳಲಿದೆ. ಸುಪ್ರೀಂ ಕೊರ್ಟ್ ಆದೇಶ ಉಲ್ಲಂಘನೆ ಮಾಡಿ ನಿರ್ಮಾಣಕ್ಕೆ ಯತ್ನ ಸರಿಯಲ್ಲ. ರೈತರು ಸೇರಿದಂತೆ ಸಾರ್ವಜನಿಕರು ಕೂಡ ಯೋಚನೆ ಮಾಡಬೇಕಾಗಿದೆ. ಆದ್ದರಿಂದ ಯೋಜನೆ ನಿಲ್ಲಿಸಬೇಕು. ಇಲ್ಲವಾದಲ್ಲಿ ಹೋರಾಟ ನಡೆಸುತ್ತೇವೆ. ಸುನಂದಾ ಜಯರಾಂ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಹಿತರಕ್ಷಣಾ ಸಮಿತಿ ಅಮ್ಯೂಸ್ಮೆಂಟ್ ಪಾರ್ಕ್ ಅನುಪಯುಕ್ತ ಯೋಜನೆ. ಮೈಸೂರು ಮಹಾರಾಜರು ಅಣೆಕಟ್ಟೆ ನಿರ್ಮಿಸಿದ್ದು ಮಂಡ್ಯ, ಮೈಸೂರು, ಬೆಂಗಳೂರು, ಸೇರಿದಂತೆ ವಿವಿಧ ಜಿಲ್ಲೆಯ ಜನರು, ರೈತರಿಗೆ ಅನುಕೂಲವಾಗಲೆಂದೆ ಹೊರತು ಇಂತಹ ಯೋಜನೆಗಳಿಗಲ್ಲ. ಇದರ ಬದಲಿಗೆ ಬೃಂದಾವನವನ್ನೇ ಪರಿಸರ ಸ್ನೇಹಿ ಹಾಗೂ ಇನ್ನಷ್ಟು ಸುಂದರಗೊಳಿಸಲು ಕಾರ್ಯಕ್ರಮ ರೂಪಿಸುವುದು ಒಳಿತು. ರವಿಶಂಕರೇಗೌಡ ಗ್ರಾಪಂ ಪ್ರಭಾರ ಅಧ್ಯಕ್ಷ, ಕೆ.ಆರ್.ಸಾಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net