ಕೆಆರ್‌ಎಸ್‌ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ವಿರೋಧ: ರಾಜ್ಯಸರ್ಕಾರದ ನಿಲುವಿಗೆ ಪ್ರಗತಿಪರ ಸಂಘಟನೆಗಳ ಖಂಡನೆ

Opposition to amusement park at KRS Mandya
Published on

ಮಂಡ್ಯ: ಕೆಆರ್‌ಎಸ್‌ನಲ್ಲಿ ರಾಜ್ಯಸರ್ಕಾರ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣಕ್ಕೆ ಆರಂಭದಲ್ಲಿಯೇ ಸಂಘಟನೆಗಳ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಯೋಜನೆಯಿಂದ ಹಿಂದೆ ಸರಿಯುವಂತೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಯೋಜನೆ ಮಾಡುವುದಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಘೋಷಣೆ ಮಾಡಿದ ಬೆನ್ನಲ್ಲೇ ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಮತ್ತು ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಸಭೆ ಆಯೋಜಿಸಿದರು. ಮಾತ್ರವಲ್ಲದೆ ಯೋಜನೆಯ ಸಾಧಕ ಬಾಧಕದ ಬಗ್ಗೆ ಚರ್ಚೆ ಮಾಡಿದರು.
ಖ್ಯಾತ ಪರಿಸರವಾದಿ ಡಾ.ಯಲ್ಲಪ್ಪರೆಡ್ಡಿ ಮಾತನಾಡಿ, ಕೆಆರ್‌ಎಸ್ ತಳಭಾಗದಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡಲೊರಟಿರುವುದು ಗಂಭೀರವಾದ ವಿಷಯ. ಇದು ಜೀವ ವೈವಿಧ್ಯದ ಅಳಿವು ಉಳಿವಿನ ಪ್ರಶ್ನೆ. ಅಭಿವೃದ್ಧಿ ಹೆಸರಿನಲ್ಲಿ ಪರಿಸರ ನಾಶ ಸಲ್ಲದು. ಭೂತಾಯಿಯ ಅಂಗಾಂಗ ಕಿತ್ತು ತಿನ್ನುವ ಕೆಲಸಕ್ಕೆ ಕೈ ಹಾಕಬೇಡಿ. ಕೇರಳದ ವೈಯನಾಡು, ಹಿಮಾಲಯ, ಉತ್ತರಕನ್ನಡ ಮತ್ತು ಕೊಡಗಿನಲ್ಲಿ ಆಗಿರುವ ದುರಂತ ನಮ್ಮ ಕಣ್ಣ ಮುಂದಿದೆ. ಇದು ನಿಮಗೆ ಗೊತ್ತಿಲ್ಲವೇ?. ಇದಕ್ಕೆ ಹೋಲಿಸಿದರೆ ಜಲಾಶಯದ ಪಕ್ಕ ನಡೆಸುವ ಅಭಿವೃದ್ಧಿ ದುರಂತಕ್ಕೆ ದಾರಿಯಾಗುತ್ತದೆ ಎಂದು ಎಚ್ಚರಿಸಿದರು.
ಇತ್ತೀಚೆಗೆ ಪ್ರಧಾನಮಂತ್ರಿ ಉದ್ಘಾಟಿಸಿದ ಜಲಾಶಯದ ಒಂದು ವಾರದಲ್ಲಿ ಶಿಥಿಲಗೊಂಡಿದೆ. ರಾಜ್ಯಸರ್ಕಾರ ಉಪಯೋಗಿಸುವ 2,600 ಕೋಟಿ ರೂ ಜನರ ತೆರಿಗೆ ಎಂಬುದು ನೆನಪಿನಲ್ಲಿರಲಿ. ಖಾಸಗಿ ವ್ಯಕ್ತಿಗಳಿಗೆ ಜಾಗ, ನೀರು, ವಿದ್ಯುತ್ ಕೊಟ್ಟು ಜನರಿಗೆ ಅಪಾಯ ತಂದೊಡ್ಡುತ್ತಿದ್ದಾರೆ. ಹೋರಾಟ ಎಂಬುದು ಸುಲಭದ ಮಾತಲ್ಲ. ಕೆ.ವಿ.ಶಂಕರಗೌಡ, ಜಿ.ಮಾದೇಗೌಡ ಹೋರಾಟಕ್ಕೆ ರೋಲ್ ಮಾಡೆಲ್ ಆಗಿದ್ದಾರೆ. ಅಂತಹ ತಾಕತ್ತು ಬದ್ಧತೆ ಯಾರಿಗಿದೆ ಎಂದು ಪ್ರಶ್ನಿಸಿದ ಅವರು, ಕಾವೇರಿ ಹರಿಯುವ ಭಾಗದ ನಕ್ಷೆಯ ಮೂಲಕ ಆಗಬಹುದಾದ ಪರಿಣಾಮಗಳ ಬಗ್ಗೆ ಸಭೆಗೆ ಮನವರಿಕೆ ಮಾಡಿಕೊಟ್ಟರು.
ಮಾಜಿ ಶಾಸಕ ಜಿ.ಬಿ.ಶಿವಕುಮಾರ್ ಮಾತನಾಡಿ, ಸಭೆಯ ನಡವಳಿಕೆಯನ್ನು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಚುನಾಯಿತ ಪ್ರತಿನಿಧಿಗಳ ಗಮನಕ್ಕೆ ತನ್ನಿ. ಈ ಹೋರಾಟದಲ್ಲಿ ಒಗ್ಗಟ್ಟಿನಲ್ಲಿ ಶಕ್ತಿ ಇದೆ ಎಂಬುದನ್ನು ತೋರಿಸೋಣ. ನಮ್ಮ ಜನಪ್ರತಿನಿಧಿಗಳಿಗೆ ಶಾಶ್ವತ ಅಭಿವೃದ್ಧಿ ಕೆಲಸಗಳ ಬಗ್ಗೆ ಗಮನ ಕಡಿಮೆ ಎಂದರು.
ರೈತಸಂಘದ ಮುದ್ದೇಗೌಡ ಮಾತನಾಡಿ ಸರ್ಕಾರ ಎಂಟು ಜಿಲ್ಲೆಗಳ ಜನಪ್ರತಿನಿಧಿಗಳು ಮತ್ತೆ ಸಂಘಟನೆಗಳ ಅಭಿಪ್ರಾಯ ಪಡೆಯಲಿ ಹಾಗೂ ಕೋರ್ಟ್ ಆದೇಶ ಪಾಲಿಸಲಿ ಎಂದು ತಿಳಿಸಿದರು. ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್ ಮಾತನಾಡಿ, ಆಧುನೀಕರಣಕ್ಕೆ ನಮ್ಮ ವಿರೋಧ ಇಲ್ಲ. ಮುಂದೆ ಯಾವುದೇ ಅನಾಹುತಾಗಬಾರದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪರಿಸರ ಕಾಪಾಡಿಕೊಳ್ಳಬೇಕು. ಜನತೆ ಮತ್ತು ಸಂಘಟನೆ ಈ ಯೋಜನೆ ದುಷ್ಪರಿಣಾಮ ಗೊತ್ತಿದ್ದು ಸುಮ್ಮನೆ ಇರಬಾರದು. ಪ್ರಶ್ನೆ ಮಾಡಬೇಕು ಎಂದು ಎಚ್ಚರಿಸಿದರು.
ಸಭೆಯಲ್ಲಿ ಹಿತ ರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ, ಕಬ್ಬು ಬೆಳೆಗಾರರ ಸಂಘದ ಕೃಷ್ಣ, ವಿವಿಧ ಸಂಘಟನೆಗಳ ಮುಖಂಡರಾದ ನಾರಾಯಣಸ್ವಾಮಿ, ದೇವೇಗೌಡ ಹುಲಿಗೆರೆಪುರ ಇತರರಿದ್ದರು.

ಸಂಕಷ್ಟದಲ್ಲಿ ಒಬ್ಬರು ತಲೆಹಾಕಲಿಲ್ಲ
ರೈತ ಸಂಘದ(ಮೂಲ ಸಂಘಟನೆ) ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್ ಮಾತನಾಡಿ, ಕಳೆದ ಒಂದು ವರ್ಷದಿಂದ ಬರ ಬಂದು ರೈತರು ಬವಣೆ ಪಡುವಾಗ, ಕೆಆರ್‌ಎಸ್‌ನಲ್ಲಿ ನೀರು ಖಾಲಿ ಆಗಿದ್ದಾಗ ಒಬ್ಬರು ಈ ಕಡೆ ತಲೆ ಹಾಕಲಿಲ್ಲ. ನೀರು ತುಂಬಿರುವ ಈ ಸಂದರ್ಭದಲ್ಲಿ ಬಂದು ಪೂಜೆ ಮಾಡಿ ಬಾಗಿನ ಅರ್ಪಿಸಿದರೆ ಏನು ಪ್ರಯೋಜನ?. ಕನ್ನಂಬಾಡಿ ಕಟ್ಟೆ ತುಂಬಿದ ನಂತರ ಈಗ ಬಂದು ಇಲ್ಲಸಲ್ಲದ ಮಾತುಗಳನ್ನು ಆಡುತ್ತಿದ್ದಾರೆ ಎಂದು ಕಿಡಿಕಾರಿದರು.

ಬೃಂದಾವನ ಆಧುನೀಕರಣಕ್ಕೆ ವಿರೋಧವಿಲ್ಲ
ರಾಜ್ಯ ಪರಿಸರ ಮಾಲಿನ್ಯ ಮಂಡಳಿ ಮಾಜಿ ಅಧ್ಯಕ್ಷ ಪ್ರೊ.ಬಿ.ಶಿವಲಿಂಗಯ್ಯ ಮಾತನಾಡಿ, ಯಾವುದೇ ಅಭಿವೃದ್ಧಿ ಮಾಡಿದಾಗ ಎಲ್ಲ ರೀತಿಯ ಮಾಲಿನ್ಯ ಆಗುವ ಅವಕಾಶವಿದೆ. ಅಧಿಕಾರಸ್ಥರು ಅದನ್ನು ನಿಯಂತ್ರಿಸುತ್ತೇವೆ ಎನ್ನುವ ಮಾತುಗಳನ್ನು ಆಡುತ್ತಾರೆ. ಏನೇ ಇರಲಿ ಯೋಜನೆ ರೂಪುಗೊಳ್ಳುವ ಮೊದಲೇ ಇದನ್ನು ತಡೆಯೋಣ. ಕೆಆರ್‌ಎಸ್ ಸ್ಥಳದಲ್ಲಿ ಆಗುವ ಅನಾಹುತಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಹೊಣೆ ಹೊರುವುದಿಲ್ಲ ಎಂದರು.
ರಾಜ್ಯ ಸರ್ಕಾರ ಜಿಲ್ಲೆಯ ಪ್ರವಾಸೋದ್ಯಮಕ್ಕೆ 2,600 ಕೋಟಿ ರೂ ಖರ್ಚು ಮಾಡುವುದನ್ನು ಸ್ವಾಗತಿಸುತ್ತೇವೆ. ಆದರೆ ಅದು ಕೆಆರ್‌ಎಸ್ ತಳಭಾಗ ಬಿಟ್ಟು ಶಿವನಸಮುದ್ರ ಭಾಗದಲ್ಲಿ ಹರಿದು ಹೋಗುವ ಹೆಚ್ಚುವರಿ ನೀರನ್ನು ಬಳಸಿಕೊಂಡು ಮಾಡಲಿ. ಪಿಪಿಪಿ ಮಾದರಿ ಬೇಡ. ಥೀಮ್ ಪಾರ್ಕ್ ಮಾಡುವುದನ್ನು ಬೇರೆ ಕಡೆ ಮಾಡಿ ಅಭಿವೃದ್ಧಿಪಡಿಸಿದರೆ ಅದನ್ನು ಸ್ವಾಗತಿಸುತ್ತೇವೆ. ಈಗಿರುವ ಬೃಂದಾವನ ಆಧುನೀಕರಣ ಮಾಡಿದರೆ ನಮ್ಮ ವಿರೋಧ ಇಲ್ಲ. ಹೊಸದಾಗಿ ಯೋಜನೆ ಕೈಗೆತ್ತಿಕೊಳ್ಳುವುದಕ್ಕೆ ವಿರೋಧವಿದೆ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಕೈಗೊಂಡ ನಿರ್ಣಯಗಳು
ಹಲವು ಹೊತ್ತು ಚರ್ಚೆ ಬಳಿಕ ಕೆಲ ನಿರ್ಣಯ ಕೈಗೊಳ್ಳಲಾಯಿತು.

  • ಕೆಆರ್‌ಎಸ್ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಅನುಮತಿ ಪಡೆದಿಲ್ಲವಾದ್ದರಿಂದ ಜಲಾಶಯದ ತಳಭಾಗದಲ್ಲಿ ಬೃಂದಾವನ ಅಮ್ಯೂಸ್‌ಮೆಂಟ್ ಪಾರ್ಕ್/ ಡಿಸ್ನಿಲ್ಯಾಂಡ್ ನಿರ್ಮಾಣದ ವಿಚಾರವನ್ನು ಸರ್ಕಾರ ಕೂಡಲೇ ಕೈ ಬಿಡಬೇಕು.
  • ಪರಿಸರ, ಸಾಮಾಜಿಕ, ಆರ್ಥಿಕ, ಆರೋಗ್ಯ ಕ್ಷೇತ್ರದ ಮೇಲೆ ದುಷ್ಪರಿಣಾಮ ಬೀರುತ್ತದೆ. ಮುಂದಿನ ಪೀಳಿಗೆಯ ದೃಷ್ಟಿಯಿಂದ ಜಲಾಶಯದ ಭದ್ರತೆಯ ಬಗ್ಗೆ ಸರ್ಕಾರ ಯೋಚಿಸಬೇಕು.
  • ಕೆಆರ್‌ಎಸ್ ತಳಭಾಗದಲ್ಲಿ ನಡೆಸುವ ಯೋಜನೆ ಕೈಬಿಟ್ಟು ಶಿಂಷಾದವರೆಗಿನ ಯಾವುದೇ ಕೃಷಿಯೇತರ ಪ್ರದೇಶದಲ್ಲಿ ನಿರ್ಮಾಣ ಮಾಡಲಿ. ಅದನ್ನು ಬಿಟ್ಟು ಕೆಆರ್‌ಎಸ್‌ನಲ್ಲಿ ಮಾಡಿದರೆ ಸರ್ಕಾರದ ನಿರ್ಧಾರವನ್ನು ಸಭೆ ಒಕ್ಕೊರಲಿನಿಂದ ವಿರೋಧಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net