ಅಂಬೇಡ್ಕರ್ ವಸತಿ ಶಾಲೆ ಸ್ಥಳಾಂತರಕ್ಕೆ ವಿರೋಧ

Y.N. Goudar
Published on

ಮುಂಡರಗಿ: ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯನ್ನು ಬೇರೊಂದು ತಾಲೂಕಿಗೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ ಎನ್ನಲಾಗುತ್ತಿದೆ. ಒಂದು ವೇಳೆ ವಸತಿ ಶಾಲೆ ಸ್ಥಳಾಂತರಗೊಳಿಸುವ ಚಟುವಟಿಕೆ ನಡೆದರೆ ತಾಲೂಕಿನಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ತಾಲೂಕು ಅಭಿವೃದ್ಧಿ ಹೋರಾಟ ವೇದಿಕೆ ಅಧ್ಯಕ್ಷ ವೈ.ಎನ್. ಗೌಡರ ಎಚ್ಚರಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ.ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯು 6ರಿಂದ 10ನೇ ತರಗತಿವರೆಗೆ ಇದೆ. ಸ್ವಂತ ಕಟ್ಟಡವಿಲ್ಲ ಎನ್ನುವ ಕಾರಣಕ್ಕೆ ಬೇರೆಡೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಈ ರೀತಿ ಆಗುವುದಕ್ಕೆ ಬಿಡುವುದಿಲ್ಲ. ಸ್ವಂತ ಕಟ್ಟಡ ಆಗುವವರೆಗೂ ಬಾಡಿಗೆ ಕಟ್ಟಡದಲ್ಲಿದ್ದರೂ ಇಲ್ಲಿಯೇ ಇರಬೇಕು ಹೊರತು ಬೇರೊಂದು ತಾಲೂಕಿಗೆ ಸ್ಥಳಾಂತರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬಾರದು ಎಂದರು.

ಈಗಾಗಲೆ ತಾಲೂಕಿನ ಡಂಬಳ ಗ್ರಾಮದಲ್ಲಿದ್ದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯನ್ನು ಬೇರೆ ತಾಲೂಕಿಗೆ ಸ್ಥಳಾಂತರಿಸಿದ್ದಾರೆ. ಇದನ್ನು ಸಹ ಈಗ ಬೇರೆಡೆ ಸ್ಥಳಾಂತರಗೊಂಡರೆ ಏನು ಅರ್ಥ? ತಾಲೂಕು ಮುಂಡರಗಿ ಹೋಬಳಿ ಶಿರಹಟ್ಟಿ ಕ್ಷೇತ್ರಕ್ಕೆ, ಡಂಬಳ ಹೋಬಳಿ ರೋಣ ಕ್ಷೇತ್ರಕ್ಕೆ ಒಡೆದು ಹೋದ ಮೇಲೆ ನಮ್ಮಲ್ಲಿ ನಾಯಕತ್ವದ ಕೊರತೆಯಾಗಿದೆ. ಈ ಕುರಿತು ಗದಗ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗುವುದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net