ಸಾಮಾಜಿಕ ಭಂಗ ತರುವ ಕೆಲಸಕ್ಕೆ ವಿರೋಧ

24 KOTTUR 01
ಕೊಟ್ಟೂರಿನಲ್ಲಿ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ಗ್ರೇಡ್-2 ತಹಸೀಲಾರ್‌ಗೆ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಬದ್ದಿ ಮರಿಸ್ವಾಮಿ, ಹನುಮಂತಪ್ಪ, ಅಜ್ಜಪ್ಪ ಬಿ.,ದುರುಗೇಶ, ಕಂದಗಲ್ಲು ಪರುಶುರಾಮ, ಕೆಂಗರಾಜ, ಕುಬೇರಪ್ಪ, ಚಂದ್ರಶೇಖರ, ಕೊಲ್ಲಾರಪ್ಪ ಎಚ್., ಪಿ.ಮಹೇಶ, ಶಿವರಾಜ ಬಿ., ದಡಾರಪ, ಅನ್ವರ, ಭರಮಪ್ಪ ಇತರರಿದ್ದರು.
Published on

ಕೊಟ್ಟೂರು: ಕೇಂದ್ರ ಗೃಹ ಸಚಿವ ಅಮಿತ್ ಷಾ ಸಮಾಜದಲ್ಲಿ ಸೌಹಾರ್ದತೆಗೆ ಭಂಗ ತರುವ ಕೆಲಸ ಮಾಡಿದ್ದಾರೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಬದ್ದಿ ಮರಿಸ್ವಾಮಿ ಹೇಳಿದರು.

ಪಟ್ಟಣದಲ್ಲಿ ಸಾಮೂಹಿಕ ಸಂಘಟನೆಗಳ ಒಕ್ಕೂಟದಿಂದ ಮಂಗಳವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು. ಅಮಿತ್ ಷಾ ಹೇಳಿಕೆ ಮನು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ಅಂಬೇಡ್ಕರ್ ರಚಿಸಿದ ಸಂವಿಧಾನದ ಅನ್ವಯ ಮೀಸಲಾತಿಯಡಿ ಗೆದ್ದಿರುವ ಬಿಜೆಪಿಯವರು ಹಾಗೂ ಷಾ ರಾಜೀನಾಮೆ ಕೊಡಬೇಕೆಂದು ಅಗ್ರಹಿಸಿದರು.

ಡಿಎಸ್‌ಎಸ್ ಮುಖಂಡ ತಗ್ಗಿನ ಕೊಟ್ರೇಶ, ಅಂಬೇಡ್ಕರ್ ಅವರನ್ನು ಅವಮಾನಿಸುವ ಮೂಲಕ ಅಮಿತ್ ಷಾ ಇಡೀ ಶೋಷಿತ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ದೇಶದ ಶೋಷಿತರು ಎಂದೂ ಅವರನ್ನು ಕ್ಷಮಿಸಬಾರದು ಎಂದರು.

ತಾಲೂಕು ಸಂಘದ ಅಧ್ಯಕ್ಷ ಬಿ. ದುರುಗೇಶ ಮಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ಇಡೀ ದೇಶದ ಜನತೆ ಸೌಹಾರ್ದದಿಂದ ಬಾಳುತ್ತಿದೆ. ಈ ಶಾಂತಿ ವಾತಾವರಣ ಕದಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಹೇಳಿದರು. ವಕೀಲ ಹನುಮಂತಪ್ಪ, ವಕೀಲ ಅಜ್ಜಪ್ಪ ಮಾತನಾಡಿದರು. ಪ್ರತಿಭಟನಾಕಾರರು ಪಟ್ಟಣದ ಬಸ್ ನಿಲ್ದಾಣದ ಬಳಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ನಡೆಸಿದರು. ಗ್ರೇಡ್-2 ತಹಸೀಲ್ದಾರ್ ಪ್ರತಿಭಾ ಅವರಿಗೆ ಮನವಿ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net