ಆಡಳಿತ ಮಾತ್ರವಲ್ಲ ವಿಪಕ್ಷಗಳು ಪ್ರಬಲವಾಗಿರಬೇಕು

D.8-MDG-1P1
ಮೂಡಿಗೆರೆಯಲ್ಲಿ ಏರ್ಪಡಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಜಯಪ್ರಕಾಶ್ ಹೆಗ್ಡೆ ಮಾತನಾಡಿದರು. ನಯನಾ ಮೋಟಮ್ಮ, ಮೋಟಮ್ಮ, ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ ಇತರರಿದ್ದರು.
Published on

ಮೂಡಿಗೆರೆ: ಪ್ರಜಾಪ್ರಭುತ್ವದಲ್ಲಿ ಉತ್ತಮ ಸರ್ಕಾರ ಆಡಳಿತಕ್ಕೆ ಬರಬೇಕು. ಜತೆಗೆ ವಿರೋಧ ಪಕ್ಷ ಕೂಡ ಪ್ರಬಲವಾಗಿರಬೇಕು. ಆಗ ಮಾತ್ರ ಜನತೆಗೆ ಉತ್ತಮ ಸೇವೆ ನೀಡಲು ಸಾಧ್ಯ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ಪಟ್ಟಣದ ಕಾಂಗ್ರೆಸ್ ಭವನದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಆಡಳಿತದಲ್ಲಿದ್ದಾಗ ವಿಪಕ್ಷ ನಾಯಕರ ಮಾತಿಗೆ ಬೆಲೆ ನೀಡಲಾಗುತ್ತಿತ್ತು. ಆದರೆ ಬಿಜೆಪಿ ಅಧಿಕಾರದಲ್ಲಿದ್ದಾಗ ವಿಪಕ್ಷದವರ ಮಾತನ್ನು ಕೇಳುವ ಮನಸ್ಥಿತಿಯೇ ಇಟ್ಟುಕೊಂಡಿಲ್ಲ ಎಂದು ದೂರಿದರು.
ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಜನರಿಗೆ ನೀಡಿದ ಭರವಸೆ ಒಂದನ್ನೂ ಈಡೇರಿಸಿಲ್ಲ. ಇದನ್ನು ದೇಶದ ಜನತೆ ಪ್ರಶ್ನೆ ಮಾಡಲಿಲ್ಲ. ಹಾಗಾಗಿ ಬಿಜೆಪಿಯವರು ಪೊಳ್ಳು ಭರವಸೆ ನೀಡುತ್ತಲೇ ಅಧಿಕಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ನುಡಿದಂತೆ ನಡೆದ ಕಾಂಗ್ರೆಸ್ ಸರ್ಕಾರ ಹಾಗೂ ಪೊಳ್ಳು ಭರವಸೆ ನಿಡುವ ಬಿಜೆಪಿ ಸರ್ಕಾರದ ಬಗ್ಗೆ ಜನ ತಾಳೆ ಹಾಕಲು ಪ್ರಾರಂಭಿಸಿದ್ದಾರೆ. ಇದರಿಂದ ಬಿಜೆಪಿ ಅವರಿಗೆ ಸೋಲಿನ ನಡುಕ ಉಂಟಾಗಿದೆ ಎಂದು ಹೇಳಿದರು.
ಮಾಜಿ ಸಭಾಪತಿ ಬಿ.ಎಲ್.ಶಂಕರ್ ಮಾತನಾಡಿ, ಜನರ ಭಾವನೆ ಹಾಗೂ ಸುಳ್ಳು ಭರವಸೆ ನೀಡುವ ಮೂಲಕ ಅಧಿಕಾರ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಿಜೆಪಿ ಬೆಲೆ ಏರಿಕೆ, ಆರ್ಥಿಕ ಸಂಕಷ್ಟ, ನಿರುದ್ಯೋಗ ಸಮಸ್ಯೆ ಸೃಷ್ಟಿ ಮಾಡಿ ಜನರ ಬದುಕು ಕಿತ್ತುಕೊಂಡಿದೆ. ಜನರ ಬದುಕು ಉತ್ತಮಗೊಳಿಸುವ ಸಲುವಾಗಿ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಮಾತ್ರ ಎಂದರು.
ನುಡಿದಂತೆ ನಡೆಯುವ ಪಕ್ಷವೊಂದಿದ್ದರೆ ಅದು ಕಾಂಗ್ರೆಸ್ ಮಾತ್ರ ಎಂಬುದು ಜನರಿಗೆ ಅರಿವಾಗಿದೆ. ಹಾಗಾಗಿ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್‌ನ್ನು ಬೆಂಬಲಿಸಿ, ಬಿಜೆಪಿಯನ್ನು ಹೊರ ಹಾಕಿದ್ದಾರೆ. ಅಲ್ಲದೇ ಸಂಸದೀಯ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು ಮೋದಿ ಸರ್ಕಾರ ತೊಲಗಿಸಲು ದೇಶದ ಜನತೆ ಸಿದ್ಧರಾಗಿದ್ದಾರೆ. ಪ್ರಮುಖರಾದ ಬಿ.ಬಿ.ನಿಂಗಯ್ಯ, ಎಂ.ಪಿ.ಕುಮಾರಸ್ವಾಮಿ ಕಾಂಗ್ರೆಸ್ ಸೇರ್ಪಡೆಗೊಂಡಿರುವುದು ಪಕ್ಷಕ್ಕೆ ಇನ್ನಷ್ಟು ಬಲ ತಂದಿದೆ. ಸಂಸತ್‌ನಲ್ಲಿ ಜನತೆ ಸಮಸ್ಯೆ ಬಗೆಹರಿಸುವ ಜತೆಗೆ ಹೆಚ್ಚಿನ ಅನುದಾನ ತರುವ ಚಾತುರ್ಯತೆ ಹೊಂದಿರುವ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಶಾಸಕಿ ನಯನಾ ಮೋಟಮ್ಮ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಅಂಶುಮಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net