ಕಲ್ಲು ತೂರಾಟದಲ್ಲಿ ಪ್ರತಿಪಕ್ಷದ ರಾಜಕಾರಣ

New JG 2 New
Published on

ಹುಬ್ಬಳ್ಳಿ : ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕಲ್ಲು ತೂರಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ವಿರೋಧ ಪಕ್ಷ ನಾಯಕರು ರಾಜಕಾರಣ ಮಾಡುತ್ತಿರುವುದು ಸರಿಯಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದ್ದು, ತಪಿತಸ್ಥರಿಗೆ ಶಿಕ್ಷೆಯಾಗಲಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದರು.

ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಗಣೇಶ ಬಂದರೆ ಒಳ್ಳೆಯದಾಗುತ್ತದೆ ಹೊರತು ಗದ್ದಲ ಆಗಲ್ಲ. ಇಂತಹ ಘಟನೆಗಳು ನಡೆದಾಗ ರಾಜಕೀಯ ಮಾಡಬಾರದು. ಪೊಲೀಸ್ ವ್ಯವಸ್ಥೆ ಇದ್ದು, ಎಲ್ಲ ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ ಎಂದರು.

ರಾಜ್ಯದಲ್ಲಿ ಅನೇಕ ಉತ್ತಮ ಕೆಲಸಗಳಾಗುತ್ತಿವೆ. ಆದರೆ ಬಿಜೆಪಿ ಇಂತಹ ವಿಚಾರಗಳನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದೆ ಎಂದು ದೂರಿದರು.

ಕಲ್ಲು ತೂರಿದವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿದ್ದಾರೆ. ಅದು ಜನಪ್ರತಿನಿಧಿಗಳು ಮಾಡುವ ಕೆಲಸವಲ್ಲ ಎಂದು ಹೇಳಿದರು.

ರಾಜ್ಯ ಸರ್ಕಾರ ಕೆಲವು ಪ್ರಕರಣಗಳನ್ನು ಹಿಂದೆಪಡೆದಿರುವ ಕುರಿತು ಪ್ರತಿಕ್ರಿಯಿಸಿದ ಸಚಿವ ಜಾರ್ಜ್, ರಾಜ್ಯದಲ್ಲಿ ಅಧಿಕಾರ ನಡೆಸಿದ ಎಲ್ಲ ಸರ್ಕಾರಗಳು ಹಲವು ಪ್ರಕರಣಗಳನ್ನು ಹಿಂದಕ್ಕೆ ಪಡೆದುಕೊಂಡಿವೆ. ಪ್ರಕರಣ ಹಿಂಪಡೆಯಲು ಹಲವಾರು ನಿಯಮಗಳಿವೆ ಎಂದು ತಿಳಿಸಿದರು.

ದಸರಾ ಹಬ್ಬ ಉದ್ಘಾಟಿಸಲಿರುವ ಬಾನು ಮುಸ್ತಾಕ್ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಈ ಹಿಂದಿನ ಸರ್ಕಾರಗಳು ಸಹ ಹಲವಾರು ಬಾರಿ ಬೇರೆ ಧರ್ಮದವರನ್ನು ಕರೆಯಿಸಿ ದಸರಾ ಉದ್ಘಾಟಿಸಿವೆ. ರಾಜ್ಯದಲ್ಲಿ ಎಲ್ಲ ಧರ್ಮದವರು ಇದ್ದಾರೆ. ಸರ್ಕಾರ ಕೈಗೊಂಡಿರುವ ನಿರ್ಧಾರ ಸರಿಯಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net