

ಕೊಪ್ಪ: ಬಿಜೆಪಿ ದಬ್ಬಾಳಿಕೆ ವಿರೋಧಿಸಿ ಜೆಡಿಎಸ್ ಕಾರ್ಯಕರ್ತರು ಮತ್ತು ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು ಮಾಡಿಕೊಂಡ ಮೈತ್ರಿಗೆ ಜೆಡಿಎಸ್ ಕಾರ್ಯಕರ್ತರ ವಿರೋಧ ಇದೆ ಎಂದು ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ ಹೇಳಿದರು.
ಈ ಬಾರಿ ಕಾಂಗ್ರೆಸ್ ಪರ ಅಲೆಯಿದೆ. ಜತೆಗೆ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ಅವರ ವೈಯಕ್ತಿಕ ವರ್ಚಸ್ಸು ಮತ್ತು ಅವರು ಸಂಸದರಾಗಿದ್ದ 20 ತಿಂಗಳಿನಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳು ಗೆಲುವಿಗೆ ಸಹಕಾರಿಯಾಗಲಿವೆ. ಮೂಡಿಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಸಿಗಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಸಾಂವಿಧಾನಿಕ ಹುದ್ದೆಯಿದೆ. ಲೋಕಸಭಾ ಟಿಕೆಟ್ ಆಕಾಂಕ್ಷಿಯಲ್ಲದ ಅವರನ್ನು ಬಿಜೆಪಿ ಅಭ್ಯರ್ಥಿಯಾಗಿ ಮಾಡಿದೆ. ಶ್ರೀನಿವಾಸ ಪೂಜಾರಿ ರಾಜಕೀಯ ನಿರುದ್ಯೋಗಿ ಅಲ್ಲ. ನೈಜ ನೀರುದ್ಯೋಗಿ ಆಗಿರುವ ಜಯಪ್ರಕಾಶ್ ಹೆಗ್ಡೆ ಅವರನ್ನು ಈ ಬಾರಿ ಬೆಂಬಲಿಸಬೇಕೆಂದು ಮನವಿ ಮಾಡಿದರು.
ಶೃಂಗೇರಿ ಕ್ಷೇತ್ರ ಚುನಾವಣಾ ಉಸ್ತುವಾರಿ ಕುಕ್ಕುಡಿಗೆ ರವೀಂದ್ರ ಮಾತನಾಡಿ, ಪ್ರತಿ ಬೂತ್ ಮಟ್ಟದಲ್ಲಿ ಸಭೆಗಳನ್ನು ನಡೆಸಲಾಗುತ್ತಿದೆ. ಅತಿ ಹೆಚ್ಚು ಮತ ಕಾಂಗ್ರೆಸ್ ಪಡೆದುಕೊಳ್ಳುತ್ತದೆ. ಬಾಳೆಹೊನ್ನೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರ ನಡೆಸುತ್ತಾರೆ ಎಂದರು.
ಮುಖಂಡ ಸುಧೀರ್‌ಕುಮಾರ್ ಮುರೊಳ್ಳಿ ಮಾತನಾಡಿ, ಜಯಪ್ರಕಾಶ್ ಹೆಗ್ಡೆ 20 ತಿಂಗಳಿನಲ್ಲಿ ಮಾಡಿದ ಕೆಲಸ ಸಂಸದೆ ಶೋಭಾ ಕರಂದ್ಲಾಜೆ 10 ವರ್ಷದಲ್ಲಿ ಮಾಡಿಲ್ಲ. ಜಯಪ್ರಕಾಶ್ ಹೆಗ್ಡೆ ಅಡಕೆ ಬೆಳೆಗಾರ ಪರವಾಗಿ ಸಂಸತ್‌ನಲ್ಲಿ ದನಿ ಎತ್ತಿದವರು. ಆದ್ದರಿಂದ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸಬಲ್ಲ ಅವರು ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶ್ರೀಜಿತ್, ದುರ್ಗಾಚರಣ್, ನುಗ್ಗಿ ಮಂಜುನಾಥ್, ಓಣಿತೋಟ ರತ್ನಾಕರ್, ಕೆಸವೆ ರಾಮಪ್ಪ, ಮಹಮ್ಮದ್ ತೈಯಿಬು ಇದ್ದರು.