ವಿಪಕ್ಷ ನಾಯಕರು ನಿಜಕ್ಕೂ ಅಯೋಗ್ಯರು

eshwarappa
Published on

ಮೈಸೂರು: ‘ಕೇಂದ್ರದ ಪ್ಯಾಕೇಜ್ ಬೋಗಸ್’ ಎಂದು ಟೀಕೆ ಮಾಡಿರುವ ರಾಜ್ಯದ ವಿರೋಧ ಪಕ್ಷದ ನಾಯಕರು ನಿಜಕ್ಕೂ ಅಯೋಗ್ಯರು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಕಿಡಿಕಾರಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿರುವುದು ಬೋಗಸ್ ಎಂದು ಟೀಕಿಸಿರುವ ವಿರೋಧ ಪಕ್ಷದ ನಾಯಕರೇ ಬೋಗಸ್. ಇನ್ಮುಂದೆ ಯಾವುದೇ ಯೋಜನೆ ಪ್ರಕಟಿಸುವ ಮೊದಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಕೇಳಿಕೊಂಡು ಪ್ರಕಟಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೇಳುತ್ತೇನೆ ಎಂದು ಕುಟುಕಿದರು.

ಮೋದಿ ಅವರು ಕರೊನಾವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಹೀಗಾಗಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಸರ್ಟಿಫಿಕೇಟ್ ಬೇಕಾಗಿಲ್ಲ. ಪ್ರತಿಪಕ್ಷವಾಗಿ ಟೀಕೆ ಮಾಡುವುದರಲ್ಲೇ ಆನಂದ ಕಂಡರೆ ಟೀಕೆ ಮಾಡಲಿ. ನನ್ನ ಅಭ್ಯಂತರವಿಲ್ಲ ಎಂದರು.

ನರೇಗಾಕ್ಕೆ 40 ಸಾವಿರ ಕೋಟಿ ರೂ.: ಕರೊನಾ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ಧಿ ಇಲಾಖೆಗೆ 40 ಸಾವಿರ ಕೋಟಿ ರೂ. ನೀಡಿದ್ದು, ನರೇಗಾ ಯೋಜನೆಗೆ ಹೆಚ್ಚಿನ ಒತ್ತು ಸಿಕ್ಕಿದೆ. ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಒಂದೇ ದಿನ 9 ಲಕ್ಷಕ್ಕೂ ಅಧಿಕ ಜನರು ನರೇಗಾದಡಿ ಕೆಲಸ ಮಾಡಿದ್ದಾರೆ. ಈವರೆಗೆ ವರ್ಷದಲ್ಲಿ ನೂರು ದಿನ ಕೆಲಸ ನಡೆಯುತ್ತಿತ್ತು. ಅದನ್ನು 150 ದಿನಗಳಿಗೆ ಏರಿಕೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ರಾಜ್ಯದಲ್ಲಿ ಅಂತರ್ಜಲದ ಮಟ್ಟ ಕುಸಿಯುತ್ತಿದೆ. ಹೀಗಾಗಿ ಅಂತರ್ಜಲ ಹೆಚ್ಚಿಸುವ ಕೆಲಸಗಳು ನಡೆಯುತ್ತಿವೆ. ಇದಕ್ಕಾಗಿ ಅಂತರ್ಜಲ ಚೇತನ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ವಿರೋಧ ಪಕ್ಷದವರು ಈ ಕೆಲಸವನ್ನು ನೋಡಲಿ. ಪ್ರತಿ ವಿಚಾರದಲ್ಲಿ ಟೀಕೆ ಮಾಡ್ತಾರೆ. ಕೇವಲ ಟೀಕೆ ಮಾಡುವುದೇ ವಿರೋಧ ಪಕ್ಷದ ಕೆಲಸ ಆಗುವುದು ಸರಿಯಲ್ಲ ಎಂದರು.

ಬೆಂಗಳೂರಿನ ಗಾಂಧಿ ಪ್ರತಿಮೆ ಬಳಿ ಅನುಮತಿ ಪಡೆಯದೆ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದ್ದಾರೆ. ಸಂವಿಧಾನದ ಕುರಿತು ಪಾಠ ಮಾಡುವ ಇವರು ಪ್ರತಿಭಟನೆ ನಡೆಸಲು ಏಕೆ ಅನುಮತಿ ಪಡೆಯಲಿಲ್ಲ? ಎಂದು ಪ್ರಶ್ನಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರ ಅಧಿಕಾರಾವಧಿಯನ್ನು ಮೊಟಕು ಮಾಡಲ್ಲ. ಅವುಗಳ ಅವಧಿ ಪೂರ್ಣಗೊಂಡ ಬಳಿಕವೇ ಗ್ರಾಪಂಗೆ ರೋಸ್ಟರ್ ಪದ್ಧತಿ ಪ್ರಕಾರ ಜಿಲ್ಲಾಧಿಕಾರಿಗಳು ಸದಸ್ಯರ ಸಮಿತಿಯನ್ನು ರಚನೆ ಮಾಡಲಿದ್ದಾರೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net