ಸಿಎಂ ಸಿದ್ದರಾಮಯ್ಯ ಮತಾಂತರಕ್ಕೆ ರಾಯಭಾರಿ: ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಟೀಕೆ

Opposition leader R. Ashok criticized Siddaramaiah Mandya
Published on

ಮಂಡ್ಯ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತಾಂತರಕ್ಕೆ ರಾಯಭಾರಿಯಾಗಿದ್ದಾರೆ. ಕಾಂಗ್ರೆಸ್ ನಾಯಕಿ ಸೋನಿಯಾಗಾಂಧಿ ಅವರನ್ನು ಮೆಚ್ಚಿಸಲು ಹಾಗೂ ಸಿಎಂ ಪದವಿ ಉಳಿಸಿಕೊಳ್ಳಲು ರಾಜ್ಯದಲ್ಲಿ ಸಮೀಕ್ಷೆ ಮಾಡಿಸುತ್ತಿದ್ದಾರೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಆರೋಪಿಸಿದರು.

ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕೆನ್ನುವ ಒಪ್ಪಂದ ಆಗಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಸಿಎಂ ಸ್ಥಾನಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ದೇವಾಲಯಗಳನ್ನು ಸುತ್ತುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಪದವಿ ಉಳಿಸಿಕೊಳ್ಳಲು ಕ್ರೈಸ್ತ ಸಮುದಾಯದ ಸೋನಿಯಾ ಗಾಂಧಿ ಅವರನ್ನು ಮೆಚ್ಚಿಸಲು ಸಿದ್ದರಾಮಯ್ಯ ಹಿಂದು ಧರ್ಮ ವಿರೋಧಿಯಂತೆ ನಿರ್ಣಯ ಮಾಡುತ್ತಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಕಾಂಗ್ರೆಸ್ ಮನೆಹಾಳ ರಾಜಕೀಯ ಮಾಡುತ್ತಿದೆ. ಜಾತಿ, ಧರ್ಮದ ಹೆಸರಿನಲ್ಲಿ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವುದು ಜಾತಿ ಗಣತಿಯಲ್ಲದಿದ್ದರೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಜಾತಿ ಕಾಲಂ ಏಕೆ?. ಬಹುಮುಖ್ಯವಾಗಿ 52 ಹೊಸ ಜಾತಿಗಳನ್ನು ಏಕೆ ಸೃಷ್ಟಿಸಲಾಗಿದೆ. ಜಾತಿ ಹೆಸರಿನಲ್ಲಿ ಮತಾಂತರಕ್ಕೆ ದೊಡ್ಡ ಹುನ್ನಾರ ಮಾಡುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು ಅದಕ್ಕೆ ಕರ್ನಾಟಕವನ್ನೇ ವೇದಿಕೆಯಾಗಿ ಮಾಡುತ್ತಿದೆ. ದೊಡ್ಡ ಸಮುದಾಯವನ್ನು ಇಬ್ಭಾಗ ಮಾಡಲಾಗುತ್ತಿದೆ. ಮುಸ್ಲಿಂ ಸಮುದಾಯದಲ್ಲಿ 15 ರಿಂದ 16 ಜಾತಿ, ಕ್ರಿಶ್ಚಿಯನ್ ಸಮುದಾಯದಲ್ಲಿ ಏಳೆಂಟು ಜಾತಿಗಳಿವೆ. ಆದರೆ, ಹಿಂದುಗಳ ಮೇಲೆ ಅವರಿಗೆ ಕಣ್ಣು. ಹೀಗಾಗಿ ಜಾತಿ ಜಾತಿಗಳ ನಡುವೆ ತಂದಿಕ್ಕುವ ಕೆಲಸ ಮಾಡುತ್ತಿದ್ದಾರೆ. ಅಸ್ತಿತ್ವದಲ್ಲೇ ಇಲ್ಲದ ಹೊಸ ಜಾತಿ, ಧರ್ಮಗಳನ್ನು ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.

ಹಿಂದು ಸಮುದಾಯದಲ್ಲಿ ತಾರತಮ್ಯವಿದೆ. ಪೂಜಾ ವಿಧಾನ ಸರಿಯಲ್ಲವೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಬೇರೆ ಸಮುದಾಯದಲ್ಲಿನ ಕೆಲ ಆಚರಣೆ ಸರಿಯೇ?. ಎಲ್ಲ ಧರ್ಮಗಳಲ್ಲಿ ಒಳ್ಳೆಯದು, ನ್ಯೂನತೆ ಎರಡೂ ಇದೆ. ನ್ಯೂನತೆಯನ್ನು ಸರಿಪಡಿಸಿಕೊಳ್ಳಬೇಕು. ಸಿದ್ದರಾಮಯ್ಯ ಹಿಂದು ವಿರೋಧಿ ನಡವಳಿಕೆಗೆ ಧರ್ಮಸ್ಥಳ ಪ್ರಕರಣ ಮತ್ತು ದಸರಾ ಉದ್ಘಾಟನೆ ವಿವಾದವೇ ಸಾಕ್ಷಿಯಾಗಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್‌ನಿಂದಲೇ ಕೋಮುಗಲಭೆಗಳು ಸೃಷ್ಠಿಯಾಗುತ್ತಿದೆ. ಮದ್ದೂರಿನಲ್ಲಿ ಹಿಂದುಗಳ ಮೇಲೆ ಆದ ಹಲ್ಲೆಯೇ ಇದಕ್ಕೆ ಉದಾಹರಣೆ. ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳ ವಜಾ, ಕೆ.ಜಿ ಹಳ್ಳಿ, ಡಿ.ಜಿ ಹಳ್ಳಿಯ ದಾಂಧಲೆ, ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಹಲ್ಲೆ, ಪೊಲೀಸ್ ವಾಹನಗಳ ಜಖಂ ಸೇರಿದಂತೆ ಹಲವು ಆರೋಪದಡಿಯಲ್ಲಿ ಪ್ರಕರಣ ದಾಖಲಾದರೆ ಅವುಗಳನ್ನು ಸಂಪುಟ ಸಭೆಯಲ್ಲಿ ವಜಾಗೊಳಿಸುವ ಮೂಲಕ ಮತ್ತೇ ಅಪರಾಧ ಮಾಡಲು ಉತ್ತೇಜನ ನೀಡುತ್ತಿದ್ದಾರೆ. ಒಂದು ಸಮುದಾಯದ ಓಲೈಕೆಗಾಗಿ ಅವರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತಿರುವುದರಿಂದ ಕೋಮುಗಲಭೆ, ಹಿಂದುಗಳ ಹತ್ಯೆ, ಲವ್ ಜಿಹಾದ್ ನಡೆಯುತ್ತಿವೆ. ಅದು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಲೇ ನಡೆಯುತ್ತಿದೆ ಎಂದರು.

ಸಿದ್ದರಾಮಯ್ಯ ಸಮೀಕ್ಷೆ ಬೆಲೆ ಇಲ್ಲ

ಜಾತಿ ಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಆದ್ದರಿಂದ ರಾಜಕೀಯ ದುರುದ್ದೇಶದಿಂದ ಮಾಡುತ್ತಿರುವ ಈ ಸಮೀಕ್ಷೆಗೆ ಬೆಲೆ ಇಲ್ಲ. ಮುಂದೆ ನಮ್ಮ ಸರ್ಕಾರ ಬಂದಾಗ ಪರಿಶೀಲನೆ ಮಾಡುತ್ತೇವೆ. ಜನರು ಹೇಳಿದಂತೆ ನಡೆದುಕೊಳ್ಳುತ್ತೇವೆ ಎಂದು ಆರ್.ಅಶೋಕ್ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net