ವಿಪಕ್ಷ ನಾಯಕನ ಆಯ್ಕೆ ಸಮಗ್ರ ಕರ್ನಾಟಕಕ್ಕೆ ಸೇರಿದೆ: ಸಿಟಿ ರವಿ

IMG-20231118-WA0014
Published on

ಉಡುಪಿ: ನಾಯಕರ ಆಯ್ಕೆಯಲ್ಲಿ ಯಾವ ಭಾಗದವರು ಎಂಬುದಿಲ್ಲ. ಉತ್ತರ ಕರ್ನಾಟಕದ ಬೊಮ್ಮಾಯಿ ಎರಡು ವರ್ಷ ಸಿಎಂ ಆಗಿದ್ದರು. ವಿಪಕ್ಷ ನಾಯಕನ ಆಯ್ಕೆ ಸಮಗ್ರ ಕರ್ನಾಟಕಕ್ಕೆ ಸೇರಿದೆ.  ರಾಜ್ಯ ಬಿಜೆಪಿಗೆ ನಾಯಕನನ್ನು ಆಯ್ಕೆ ಮಾಡಲಾಗಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಹೇಳಿದರು.

ಶನಿವಾರ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.

ಆರ್. ಅಶೋಕ್ ಸಮರ್ಥ ವಿಪಕ್ಷ ನಾಯಕನಾಗಿ ಎಲ್ಲಾ ಟೀಕೆಗೆ ಉತ್ತರಿಸುತ್ತಾರೆ. ನಾಯಕರಾದ ನಿರ್ಮಲಾ ಸೀತಾರಾಮನ್, ದುಷ್ಯಂತ್ ಜೊತೆ ನಮ್ಮೆಲ್ಲಾ ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ನಮ್ಮೆಲ್ಲ ಶಾಸಕರ ಜೊತೆ ಮಾತನಾಡಿ ನಿರ್ಣಯವಾಗಿದೆ ಎಂದರು.

ಬಿಜೆಪಿ ರಾಜ್ಯ ಅಧ್ಯಕ್ಷ ಸ್ಥಾನ  ರೇಸ್‍ನಲ್ಲಿ ಇಲ್ಲ ಎಂದು ಮೂರು ತಿಂಗಳ ಹಿಂದೆ ಸ್ಪಷ್ಟಪಡಿಸಿದ್ದೆ. ರೇಸ್‍ನಲ್ಲಿ ಇಲ್ಲ ಎಂದಮೇಲೆ ಬೇಸರದ ಪ್ರಶ್ನೆ ಬರುವುದಿಲ್ಲ ಜವಾಬ್ದಾರಿ ಯಾವಾಗ ಯಾರಿಗೆ ಕೊಡಬೇಕು ಎಂದು ವರಿಷ್ಠರು ತೀರ್ಮಾನಿಸುತ್ತಾರೆ. ನಾವು ತಂಡವಾಗಿ ಕೆಲಸ ಮಾಡುತ್ತೇವೆ, ಚರ್ಚೆ ಮಾಡಲು ಬಯಸುವುದಿಲ್ಲ ಎಂದರು.

ರಾಜ್ಯದಲ್ಲಿ ವೈಎಸ್‍ಟಿ ಟ್ಯಾಕ್ಸ್ ಆರೋಪ ಕೇಳಿಬಂದಿತ್ತು. ಈಗ ಆಡಿಯೋ ವೀಡಿಯೊ ರಿಲೀಸ್ ಆಗಿದೆ. ಮಾಜಿ ಶಾಸಕ ಯತೀಂದ್ರ ನಡೆ ಬಹಳ ಅನುಮಾನ ಮೂಡಿಸುತ್ತಿದೆ. ಸಿದ್ದರಾಮಯ್ಯ ಅವರು ಯತೀಂದ್ರ ಮಾತಿಗೆ ಹೆಚ್ಚು ಬೆಲೆ, ಮನ್ನಣೆ ಕೊಡುತ್ತಿದ್ದಾರೆ. ಇದೀಗ ಶಾಡೋ ಸಿಎಂ ಗುಟ್ಟಾಗಿ ಉಳಿದಿಲ್ಲ. ಹಾಗಾಗಿ ಆ ಆರೋಪ ಬಂದಿದೆ ಎಂದರು.

ಬಿಜೆಪಿಯಲ್ಲೂ ಅಪ್ಪ ಮಕ್ಕಳ ರಾಜ್ಯಭಾರ ಬಗ್ಗೆ ಮಾತನಾಡಿದ ಅವರು, ಪಾರ್ಲಿಮೆಂಟರಿ ಬೋರ್ಡು, ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರು ಕೈಗೊಂಡ ತೀರ್ಮಾನ ಅದು. ಆದರೆ, ಇಂಥ ಪ್ರಶ್ನೆಗಳು ಕೇಳಿಬರುತ್ತಿರುವುದು ನಿಜ. ಈ ಬಗ್ಗೆ ನಾನು ಈ ಸಂದರ್ಭದಲ್ಲಿ ಚರ್ಚೆ ಮಾಡುವುದಿಲ್ಲ. ಚರ್ಚಿಸಲು ಹೊರಟರೆ ಬೇರೆ ಬೇರೆ ಅರ್ಥಗಳು ಹುಟ್ಟಿಕೊಳ್ಳುತ್ತವೆ. ಹೊಸ ಅಧ್ಯಕ್ಷರ ನೇತೃತ್ವದಲ್ಲಿ ಪಕ್ಷ ಸದೃಢವಾಗಿ ಬೆಳೆಯಲಿ ಎಂದು  ತಿಳಿಸಿದರು.

.ಸ್ಪೀಕರ್ ಸ್ಥಾನ ಮೌಲ್ವಿ ಹುದ್ದೆಯಲ್ಲ

ಮುಸ್ಲಿಮರಿಗೆ ಕಾಂಗ್ರೆಸ್ ಪ್ರಧಾನ್ಯತೆ ಎಂಬ ಶಾಸಕ ಜಮೀರ್ ಭಾಷಣ ವಿಚಾರದಲ್ಲಿ ತಿರುಗೇಟು ನೀಡಿದ ಸಿ. ಟಿ. ರವಿ, ಸ್ಪೀಕರ್ ಸ್ಥಾನ ಸಾಂವಿಧಾನಿಕ ಹುದ್ದೆ. ಆ ಸ್ಥಾನ ಮಸೀದಿಯ ಮೌಲ್ವಿ ಹುದ್ದೆಯಲ್ಲ. ಬಿಜೆಪಿ ಮೌಲ್ವಿಗೆ ಜೀ ಹುಜೂೀರ್ ಅನ್ನುತ್ತಿಲ್ಲ ಆ ಹುದ್ದೆಗೆ ಸಿಗುವ ಗೌರವ ಜಾಮಿಯ ಮಸೀದಿಯ ಮುಲ್ಲಾನಿಗೆ ಸಿಗುವ ಗೌರವ ಅಲ್ಲ. ಖಾದರ್ ಘನತೆ ಹಾಳು ಮಾಡಬೇಡಿ. ಸಂವಿಧಾನದ ಬಗ್ಗೆ ಅರ್ಥ ಗೊತ್ತಿಲ್ಲದ ಜಮೀರ್ ಅಂಥವರು ಶಾಸಕರಾದರೆ ಹೀಗೇ ಆಗುವುದು ಎಂದರು.

ಪತ್ರಿಕಾಗೋಷ್ಠಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾ ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ವಕ್ತಾರ ರಾಘವೇಂದ್ರ ಕಿಣಿ, ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮುಖಂಡರಾದ ಶಿವಕುಮಾರ್ ಅಂಬಲಪಾಡಿ, ರವಿ ಆಮೀನ್, ದಾವೂದ್ ಅಬೂಬಕ್ಕರ್ ಉಪಸ್ಥಿತರಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net