ಮೈತ್ರಿ ಸರ್ಕಾರ ಬೀಳಿಸಲು ಸಿದ್ದರಾಮಯ್ಯ ಪ್ಲ್ಯಾನ್ ಮಾಡಿದ್ದು ಎಲ್ಲಿ ಗೊತ್ತಾ: ಮಂಡ್ಯದಲ್ಲಿ ನಡೆದ ಸಭೆಯಲ್ಲಿ ಗುಟ್ಟು ಬಿಚ್ಚಿಟ್ಟ ವಿಪಕ್ಷ ನಾಯಕ ಆರ್.ಅಶೋಕ್

Opposition leader Ashok criticizes Congress mandya
Published on

ಮಂಡ್ಯ: ರಾಜ್ಯದಲ್ಲಿ ಲಿಂಗಾಯತ ಸಮುದಾಯ ಬಿಟ್ಟರೇ ಒಕ್ಕಲಿಗರೆ ಹೆಚ್ಚಿದ್ದಾರೆ. ಆದರೆ ಇಂದು ಒಕ್ಕಲಿಗ ಸಮಾಜ ಜನಸಂಖ್ಯೆಯಲ್ಲಿ ಆರನೇ ಸ್ಥಾನದಲ್ಲಿದ್ದೇವೆ. ಈ ಜಾತಿಗಣತಿ ವರದಿಯನ್ನು ಬರೆಸಿದವರೇ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.

ನಗರದ ಹೊರವಲಯದ ಖಾಸಗಿ ಹೋಟೆಲ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಆದಿಚುಂಚನಗಿರಿ ಮಠಕ್ಕೆ ನಾವು ಹೋಗಿದ್ದನ್ನೇ ದೊಡ್ಡದಾಗಿ ಚರ್ಚೆ ಮಾಡುತಿದ್ದಾರೆ. ಕಾಂಗ್ರೆಸ್‌ನವರು ಮಠಕ್ಕೆ ಹೋಗಿದ್ದರೂ ಏನು ಆಗಲಿಲ್ಲ ಎಂದು ವ್ಯಂಗ್ಯವಾಡಿದರು.

ಮಣ್ಣಿನ ಮಗ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಪಕ್ಕದಲ್ಲಿ ಕೂರಬೇಕು. ಅದಕ್ಕಾಗಿ ಎಚ್.ಡಿ.ಕುಮಾರಸ್ವಾಮಿ ಗೆಲ್ಲಬೇಕೆ ಹೊರತು, ಕಂಟ್ರಾಕ್ಟರ್ ಅಲ್ಲ. ಕುಮಾರಸ್ವಾಮಿ ಸರ್ಕಾರ ಬೀಳಿಸಿದ್ದು ಬಿಜೆಪಿ ಎನ್ನುತ್ತಾರೆ. ಯಾರಪ್ಪ ಸರ್ಕಾರ ಬೀಳಿಸಿದ್ದು. ಅಂದು ಕರೆದುಕೊಂಡು ಹೋಗಿದ್ದು ನಾವು, ಆದರೆ ಕಳಿಸಿದ್ದು ಸಿದ್ದರಾಮಯ್ಯ. ಸಿದ್ದವನದಲ್ಲಿ ಕುಳಿತು ಪ್ಲ್ಯಾನ್ ಮಾಡಿದ್ದು ಯಾರು?. ನಿಖಿಲ್ ಸೋಲಿಸಿದ್ದ ನಾವೇ ಎಂದು ಸಿದ್ದರಾಮಯ್ಯ ಕೂಡ ಭಾಷಣ ಮಾಡಿದ್ದಾರೆ. ಜೆಡಿಎಸ್, ಕುಮಾರಸ್ವಾಮಿ ಬೆನ್ನಿಗೆ ಚೂರಿ ಹಾಕಿದವರು ಕಾಂಗ್ರೆಸ್. ದೇವೇಗೌಡರು ಪ್ರಧಾನಿಯಾಗಿದ್ದಾಗ ಚೂರಿ ಹಾಕಿದ ಕಾಂಗ್ರೆಸ್ ದೇಶಕ್ಕೆ ಮಾರಕ. ಆ ಪಕ್ಷ ಗೆದ್ದರೇ ಭ್ರಷ್ಟಚಾರಿಗಳಿಗೆ ರಕ್ಷಣೆ ಸಿಗಲಿದೆ. ಕೇಜ್ರಿವಾಲ್ ಜೈಲಿಗೆ ಹೋಗಾಯ್ತು. ನರೇಂದ್ರ ಮೋದಿಗೆ ರಾಹುಲ್ ಪ್ರತಿಸ್ಪರ್ಧಿ ಎಂತಲೂ ಹೇಳುತ್ತಿಲ್ಲ. ರಾಹುಲ್ನನ್ನ ಇನ್ನೂ ಪಾಪು ಎಂದೇ ಭಾವಿಸಿದ್ದಾರೆ ಎಂದರು.

ಏ.14ರಂದು ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಬೃಹತ್ ಸಭೆ ಇದೆ. ಆ ಸಭೆ ಮೂಲಕ ಇಡೀ ದೇಶದಲ್ಲಿ ಅಲೆ ಸೃಷ್ಟಿಯಾಗಬೇಕು. ಅದಕ್ಕಾಗಿ ಮಂಡ್ಯದಲ್ಲಿ ಸಭೆ ಕರೆದಿದ್ದೇವೆ. ಬಿಜೆಪಿ ಜತೆ ಜೆಡಿಎಸ್ ಕೂಡ ಸೇರಿಕೊಂಡಿದೆ. ಒಂದೇ ವೇದಿಕೆಯಲ್ಲಿ ಪ್ರಧಾನಿ ಮೋದಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಭಾಗಿಯಾಗುತ್ತಿದ್ದಾರೆ. ಬೈಕ್, ಕಾರು, ಪಾದಯಾತ್ರೆ ಮೂಲಕ ಕಾರ್ಯಕರ್ತರು ಸಮಾವೇಶಕ್ಕೆ ಬನ್ನಿ. ಮಂಡ್ಯಕ್ಕೆ ಕುಮಾರಣ್ಣ, ಇಂಡಿಯಾಗೆ ಮೋದಿ ಎಂದು ಘೋಷಣೆ ಮೊಳಗಬೇಕು. ವಿಧಾನಸೌಧದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದರು. ಆಡಳಿತ ನಡೆಸುತ್ತಿರುವ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಲ್ವ. ಕುಕ್ಕರ್ ಬಾಂಬ್ ಬ್ಲಾಸ್ಟ್ ಮಾಡಿದವನನ್ನ ಬ್ರದರ್ ಅಂತೀರಾ. ಈಗ ಒಕ್ಕಲಿಗರ ಬಗ್ಗೆ ಕಾಂಗ್ರೆಸ್‌ನವರು ಮಾತಾಡ್ತಿದ್ದಾರೆ. ಅದ್ಯಾಗಪ್ಪ ನೀನು ನಮಗೆ ಬ್ರದರ್ ಆಗುತ್ತೀಯಾ ಎಂದು ಕುಟುಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net