

ಮೈಸೂರು: ರೈತರಿಗೆ ಮರಣಶಾಸನದಂತಿರುವ ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯನ್ನು ಸರ್ಕಾರ ಕೂಡಲೇ ಹಿಂತೆಗೆದುಕೊಳ್ಳದಿದ್ದರೆ ಹೋರಾಟ ಹಮ್ಮಿಕೊಳ್ಳಲು ಎಂದು ವಿವಿಧ ಸಂಘಟನೆಗಳು ನಿರ್ಣಯ ಕೈಗೊಂಡವು.
ಜೆ.ಪಿ.ನಗರದ ಒಡನಾಡಿ ಸಂಸ್ಥೆ ಸಭಾಂಗಣದಲ್ಲಿ ಮಂಗಳವಾರ 40ನೇ ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರೈತ ವಿರೋಧಿ ಕಾನೂನುಗಳ ಪರಿಣಾಮಗಳು ಕುರಿತ ವಿಚಾರಗೋಷ್ಠಿ ಮತ್ತು ಸಂವಾದದಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆ ತಿದ್ದುಪಡಿ ಪರಿಣಾಮ ಕುರಿತು ಮಾತನಾಡಿದ ಚಿಂತಕ ಕೆ.ಪಿ.ಸುರೇಶ್, ರಾಜ್ಯ ಸರ್ಕಾರ ಈಗ ಜಾರಿಗೆ ತಂದಿರುವ ಭೂ ಸುಧಾರಣೆ ಕಾಯಿದೆ ತಿದ್ದುಪಡಿ ರೈತ ಸಂಕುಲಕ್ಕೆ ಗಂಡಾಂತರಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭೂಮಿ ಹೊಂದಿದ ರೈತರು ಈಗಿನ ಸ್ಥಿತಿಯಲ್ಲಿ ಮಾನಸಿಕ, ಆರ್ಥಿಕ, ಆಹಾರದ ಭದ್ರತೆ ಹೊಂದಿದ್ದಾರೆ. ಆದರೆ ಸರ್ಕಾರ ಜಾರಿಗೊಳಿಸುವ ಸುಧಾರಣೆಯಿಂದ ಭೂಮಿಯನ್ನೇ ಮಾರುವ ಸ್ಥಿತಿಗೆ ಬರಲಿದ್ದಾರೆ. ಇದರಿಂದ ರಾಜ್ಯದಲ್ಲಿರುವ ಸುಮಾರು 75 ಲಕ್ಷ ಸಣ್ಣ ರೈತರು, ಇಷ್ಟೇ ಪ್ರಮಾಣದಲ್ಲಿ ಕೃಷಿ ಅವಲಂಬಿತರ ಜೀವನಕ್ಕೆ ಕತ್ತಲೆ ಕವಿಯಲಿದೆ ಎಂದರು.
ಹೋರಾಟಗಾರ ಬೊಕ್ಕಳ್ಳಿ ನಂಜುಂಡಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ದಸಂಸ ಸಂಚಾಲಕರಾದ ಬೆಟ್ಟಯ್ಯಕೋಟೆ, ಅಲಗೂಡು ಶಿವಕುಮಾರ್, ಮಂಡ್ಯ ಜಿಲ್ಲಾ ರೈತ ಸಂಘದ ಅಧ್ಯಕ್ಷ ಕೆಂಪೂಗೌಡ, ಮೈಸೂರ ಜಿಲ್ಲಾ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ ಭಾಗವಹಿಸಿದ್ದರು.
ಸ್ವರಾಜ್ಯ ಇಂಡಿಯಾ ಮೈಸೂರು ತಾಲೂಕು ಅಧ್ಯಕ್ಷ ಎಚ್.ಎ.ನಂಜುಂಡಸ್ವಾಮಿ ಸಂವಾದದ ಅಧ್ಯಕ್ಷತೆ ವಹಿಸಿದ್ದರು. ಅಭಿರುಚಿ ಗಣೇಶ್, ರೈತ ಮುಖಂಡ ಪ್ರಸನ್ನ ಎನ್.ಗೌಡ. ಮಧು, ದಸಂಸ ಶಂಭುಲಿಂಗಯ್ಯ, ಚೋರನಹಳ್ಳಿ ಶಿವಣ್ಣ, ಚಿಂತಕ ಉಗ್ರ ನರಸಿಂಹೇಗೌಡ, ಚುಂಚನಹಳ್ಳಿ ಮಲ್ಲೇಶ್, ರಾಜಶೇಖರ ಕೋಟೆ, ಒಡನಾಡಿ ಸ್ಟ್ಯಾನ್ಲಿ, ಪರಶುರಾಮ, ಮಂಡಕಳ್ಳಿ ಮಹೇಶ್, ದಸಂಸ ತಾಲೂಕು ಅಧ್ಯಕ್ಷ ಕಲ್ಲಹಳ್ಳಿ ಕುಮಾರ್, ಪಿ.ಮರಂಕಯ್ಯ, ಎನ್.ಪುನೀತ್, ನೇತ್ರಾವತಿ ಇತರರಿದ್ದರು.
ರೈತ ದಮನಕಾರಿ ನೀತಿ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ವಿದ್ಯುತ್, ಎಪಿಎಂಸಿ, ಭೂ ಸುಧಾರಣೆ ಕಾಯ್ದೆಗಳಿಗೆ ತಿದ್ದುಪಡಿ ಮಾಡುವ ಮೂಲಕ ಸರ್ಕಾರ ರೈತರನ್ನು ದಮನ ಮಾಡಲು ಹೊರಟಿದೆ. ಸರ್ಕಾರದ ಈ ನಿರ್ಧಾರದಿಂದ ಗ್ರಾಮೀಣ ಆರ್ಥಿಕತೆ ಕುಸಿಯುವುದಲ್ಲದೇ ರೈತರು ನಿರಾಶರಾಗಿ ಇನ್ನಷ್ಟು ಜನ ಆತ್ಮಹತ್ಯೆಗೆ ದಾರಿಯಾಗಲಿವೆ ಎಂದರು.
ದಸಂಸ, ರೈತ ಸಂಘ ಎರಡೂ ಗ್ರಾಮೀಣ ಚಳವಳಿಗಳಾಗಿವೆ. ಸಾಮಾಜಿಕ, ಆರ್ಥಿಕ ಅಸಮಾನತೆ ವಿರುದ್ಧ ಹೋರಾಟ ನಡೆಸಿ ಕನ್ನಡದ ನೆಲದಲ್ಲಿ ಬಹಳಷ್ಟು ಪರಿಣಾಮ ಬೀರಿವೆ. ಇವತ್ತಿನ ಸಂಕಟ ಸಂದರ್ಭವನ್ನು ರೈತ ಸಂಘ, ದಸಂಸ ಅರ್ಥ ಮಾಡಿಕೊಂಡು ಒಂದಾಗಬೇಕು. ಜನಪರ ಚಳವಳಿ ಒಂದು ವೇದಿಕೆಗೆ ತಂದು ಹೋರಾಟ ರೂಪಿಸಬೇಕಾದ ಅನಿವಾರ್ಯಸ್ಥಿತಿ ನಿರ್ಮಾಣವಾಗಿದೆ ಎಂದರು.
ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ಮುಂದಿನ ಲೋಕಸಭಾ ಚುನಾವಣೆ ವೇಳೆಗೆ ರೈತರ ಎಲ್ಲ ಕೃಷಿ ಉತ್ಪನ್ನಗಳು 5 ಕಂಪನಿಗಳ ಹಿಡಿತದಲ್ಲಿ ಇರುವಂತೆ ಮಾಡುವ ಹುನ್ನಾರವಿದೆ. ಸರ್ಕಾರದ ಈ ನಿರ್ಧಾರದಿಂದ ಮುಂದೆ ರೈತರೇ ಇಲ್ಲದಂಥ ಕರಾಳ ದಿನಗಳು ಬರಲಿವೆ.
ಕೆ.ಪಿ.ಸುರೇಶ್ ಚಿಂತಕ
ಸಭೆಯ ನಿರ್ಣಯಗಳು
ರೈತರಿಗೆ ಮಾರಕವಾಗಿರುವ ಭೂ ಸುಧಾರಣೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ತಿದ್ದುಪಡಿಯನ್ನು ವಾಪಸ್ ಪಡೆಯಬೇಕು.
ಕರೊನಾ ಸಂದರ್ಭದಲ್ಲಿ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್ ಎಲ್ಲ ರೈತರಿಗೆ ತಲುಪುವಂತೆ ಸಂಪೂರ್ಣ ಜಾರಿಗೊಳಿಸಬೇಕು.
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ರೈತರಿಗೆ ಬರಬೇಕಾಗಿರುವ ಪರಿಹಾರ ಹಣ ನೀಡಲು ಕ್ರಮಕೈಗೊಳ್ಳಬೇಕು.
ಎಲ್ಲ ಬ್ಯಾಂಕ್‌ಗಳಲ್ಲಿ ರೈತರು ಪಡೆದಿರುವ ಸಾಲ ಮರುಪಾವತಿಗೆ ಒಂದು ವರ್ಷ ಅವಕಾಶ ನೀಡಿ ಬಡ್ಡಿ ಮನ್ನಾ ಮಾಡಬೇಕು.
ಬಿತ್ತನೆ ಬೀಜ, ಕೃಷಿ ಪರಿಕರಗಳಿಗೆ ನೀಡುತ್ತಿರುವ ಸಹಾಯಧನದ ಗಾತ್ರ ಹೆಚ್ಚಿಸಿ ನೆರವು ನೀಡಬೇಕು.
ಭತ್ತ ಖರೀದಿ ಕೇಂದ್ರ ತೆರೆದು, ಕಡಿಮೆ ಮಾಡಿರುವ ಹಾಲಿನ ದರ, ಸಹಾಯಧನವನ್ನು ಏರಿಕೆ ಮಾಡಬೇಕು.
ಕರೊನಾ ಸೋಂಕಿತರಿಗೆ ಉಚಿತ ಚಿಕಿತ್ಸೆ ನೀಡಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಇತರ ಕಾಯಿಲೆಗಳಿಗೂ ಚಿಕಿತ್ಸೆ ದೊರೆಯುವಂತೆ ಮಾಡಬೇಕು.