

ಮಂಡ್ಯ: ಭೂ ಸುಧಾರಣೆ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಕೈ ಬಿಡಬೇಕೆಂದು ಆಗ್ರಹಿಸಿ ದಸಂಸ ಒಕ್ಕೂಟ, ರೈತಸಂಘ(ಮೂಲ ಸಂಘಟನೆ)ದ ಮುಖಂಡರು ಶನಿವಾರ ನಗರದಲ್ಲಿ ಪ್ರತ್ಯೇಕ ಪ್ರತಿಭಟನೆ ನಡೆಸಿದರು.
ನಗರದ ಕಾವೇರಿ ವನದ ಬಳಿ ಜಮಾಯಿಸಿದ ರೈತ ಸಂಘಟನೆಯ ಮುಖಂಡರು, ಹೆದ್ದಾರಿ ಸಂಚಾರ ತಡೆಗೆ ಮುಂದಾಗಿದ್ದರಿಂದ ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಮತ್ತೊಂದೆಡೆ ಜಿಲ್ಲಾಧಿಕಾರಿ ಕಚೇರಿ ಬಳಿ ದಸಂಸ ಒಕ್ಕೂಟದ ಸದಸ್ಯರು ಧರಣಿ ನಡೆಸಿ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ಬಂಡವಾಳ ಶಾಹಿಗಳು, ಕಾರ್ಪೋರೇಟ್ ಕಂಪನಿಗಳು ಸುಲಭವಾಗಿ ಭೂಮಿ ಖರೀದಿಸಲು ಅವಕಾಶ ಕಲ್ಪಿಸುವ ಮೂಲಕ ಭೂ ಕಬಳಿಕೆಗೆ ಅವಕಾಶ ಕಲ್ಪಿಸಲಾಗಿದೆ. ಇದರಿಂದ ಆಹಾರ ಭದ್ರತೆ ಹಾಗೂ ಆಹಾರ ಸಾರ್ವಭೌಮತೆ ನಾಶವಾಗಿ ಕೃಷಿ ಕ್ಷೇತ್ರದ ಮೇಲೆ ಅಪಾಯ ತಂದೊಡ್ಡಲಿದೆ. ಆದ್ದರಿಂದ ಈ ತಿದ್ದುಪಡಿಯನ್ನು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಅಂತೆಯೇ, ಇತ್ತೀಚೆಗೆ ಎಪಿಎಂಸಿ ಕಾಯ್ದೆಗೂ ತಿದ್ದುಪಡಿ ತಂದಿದ್ದು, ಇದು ಕೂಡ ಕೃಷಿಯನ್ನು ಕಾರ್ಪೋರೇಟಿಕರಿಸಿ ಬಡ ಹಾಗೂ ಸಣ್ಣ ರೈತರನ್ನು ಒಕ್ಕಲೆಬ್ಬಿಸುವ ನೀತಿಯ ಭಾಗವಾಗಿದೆ ಎಂದು ಕಿಡಿಕಾರಿದರು.
ಮತ್ತೊಂದೆಡೆ ಕೇಂದ್ರ ಸರ್ಕಾರ ವಿದ್ಯುತ್ ವಿತರಣಾ ವ್ಯವಸ್ಥೆಯನ್ನು ಖಾಸಗಿಯವರಿಗೆ ವಹಿಸಲು ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ವಿದ್ಯುತ್ ಕ್ಷೇತ್ರ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಹಾಗೂ ನೈಸರ್ಗಿಕ ಸಂಪತ್ತು ಹೊಂದಿದೆ. ಈ ಕಾಯ್ದೆಯಂದ ಪಂಪ್‌ಸೆಟ್ ಹೊಂದಿರುವ ಶೇ.80ರಷ್ಟು ರೈತರು ಹಾಗೂ ಸಣ್ಣ ಉದ್ದಿಮೆದಾರರಿಗೆ ತೀವ್ರ ಅಪಾಯವಾಗಲಿದೆ. ಮೂರು ತಿದ್ದುಪಡಿಗಳು ರೈತರ ಪಾಲಿಗೆ ಮಾರಕವಾಗಿ, ಮರಣಶಾಸನ ಆಗಲಿವೆ. ತಕ್ಷಣ ಈ ತಿದ್ದುಪಡಿಗಳನ್ನು ರದ್ದು ಮಾಡಬೇಕೆಂದು ಆಗ್ರಹಿಸಿದರು.
ಮೈಶುಗರ್ ವ್ಯಾಪ್ತಿಯಲ್ಲಿ ಬೆಳೆದು ನಿಂತಿರುವ 8 ಲಕ್ಷ ಟನ್ ಕಬ್ಬನ್ನು ನುರಿಸಲು ರಾಜ್ಯ ಸರ್ಕಾರ ತಕ್ಷಣ ಕ್ರಮಕೈಗೊಳ್ಳಬೇಕು. ಬೇರೆ ಜಿಲ್ಲೆಯ ಕಾರ್ಖಾನೆಗಳಿಗೆ ಸರಬರಾಜು ಮಾಡಲು ಕ್ರಮವಹಿಸಬೇಕು. ಮೈಶುಗರ್ ಕಾರ್ಖಾನೆಯನು ಸರ್ಕಾರಿ ಕ್ಷೇತ್ರದಲ್ಲೇ ಉಳಿಸಿ ಆರಂಭಿಸಬೇಕು.ಭತ್ತ ಖರೀದಿ ಕೇಂದ್ರಗಳನ್ನು ಶಾಶ್ವತವಾಗಿ ತೆರೆಯಬೇಕು. ನೀರಿಲ್ಲದೆ ಒಣಗುತ್ತಿರುವ ಬೆಳೆಗಳಿಗೆ ತಕ್ಷಣ ನೀರು ಕೊಡಬೇಕೆಂದು ಒತ್ತಾಯಿಸಿ ಹೆದ್ದಾರಿ ತಡೆಗೆ ಮುಂದಾದರು.
ರಸ್ತೆ ಸಂಚಾರ ತಡೆ ಮಾಡದಂತೆ ಪೊಲೀಸರ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಪೊಲೀಸರು ಎಲ್ಲರನ್ನು ಬಂಧಿಸಿ, ಮಧ್ಯಾಹ್ನದ ನಂತರ ಬಿಡುಗಡೆ ಮಾಡಿದರು. ಅಧ್ಯಕ್ಷ ಬೋರಾಪುರ ಶಂಕರೇಗೌಡ, ಪದಾಧಿಕಾರಿಗಳಾದ ಎಸ್.ಮಂಜೇಗೌಡ, ಇಂಡುವಾಳು ಚಂದ್ರಶೇಖರ್, ಕೆ.ನಾಗೇಂದ್ರಸ್ವಾಮಿ, ಕೆ.ರಾಮಲಿಂಗೇಗೌಡ, ಸೊ.ಸಿ.ಪ್ರಕಾಶ್, ಉಮೇಶ್, ಡಿ.ಎಸ್.ಚಂದ್ರಶೇಖರ್ ಮೊದಲಾದವರಿದ್ದರು.