

ಕಲಬುರಗಿ: ಮಾಜಿ ಸಿಎಂ ಸಿದ್ದರಾಮಯ್ಯ ಕಾಯಂ ಆಗಿ ಪ್ರತಿಪಕ್ಷದಲ್ಲೇ ಇರೋದು ಖಾತ್ರಿಯಾಗಿದೆ. ಅಂತಲೇ ಮನಬಂದಂತೆ ವರ್ತಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ವ್ಯಂಗ್ಯವಾಡಿದ್ದಾರೆ.
ಖಾಲಿ ಉಳಿರುವ ನಾಲ್ಕು ಸಚಿವ ಸ್ಥಾನಗಳ ಭರ್ತಿಗೆ ಶೀಘ್ರವೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟ ವಿಸ್ತರಣೆ ಮಾಡಲಿದ್ದು, 4ರಲ್ಲಿ ಒಂದು ಸ್ಥಾನ ಕಲಬುರಗಿಗೆ ಸಿಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಹೇಳಿದ್ದಾರೆ. ಈಗಷ್ಟೆ ಬೊಮ್ಮಾಯಿ ಅಧಿಕಾರ ವಹಿಸಿಕೊಂಡು ಸಂಪುಟ ರಚಿಸಿದ್ದು, ಖಾಲಿ ಸ್ಥಾನಗಳನ್ನೂ ಶೀಘ್ರ ಭರ್ತಿ ಮಾಡಿ ಜಿಲ್ಲೆಗೆ ಆಗಿರುವ ಅನ್ಯಾಯ ಸರಿಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಬೊಮ್ಮಾಯಿ ಸರ್ಕಾರ ಪೂರ್ಣ ಅವಧಿ ಮುಗಿಸಲಿದೆ ಎಂದರು. ಇಂದಿರಾ ಕ್ಯಾಂಟೀನ್ ಹೆಸರು ಬದಲಾಯಿಸುವ ಬಗ್ಗೆ ಪ್ರತಿಕ್ರಿಯಿಸಿದ ಕಟೀಲ್, ಹಿಂದೆ ಕಾಂಗ್ರೆಸಿಗರು ಅಧಿಕಾರಕ್ಕೆ ಬಂದಾಗ ಅಟಲ್ ಸಾರಿಗೆ ನಿಲ್ಲಿಸಿದ್ದರು. ಹಲವು ಹೆಸರು ಬದಲಿಸಿದರೂ ನಾವು ವಿರೋಧಿಸಲಿಲ್ಲ. ಕಾಂಗ್ರೆಸ್ ರಾಷ್ಟ್ರ ಮತ್ತು ರಾಜ್ಯದಲ್ಲಿ ಹೆಸರಿರುವಂತೆ ವಿರೋಧಿಸಲು ಮಾತ್ರ ಪ್ರತಿಪಕ್ಷ. ರಚನಾತ್ಮಕವಾಗಿ ಕೆಲಸ ಮಾಡದ ಅದು, ವಿರೋಧ ಪಕ್ಷವಾಗಿರಲು ನಾಲಾಯಕ್ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸಚಿವ ಭಗವಂತ ಖೂಬಾ ಅವರಿಗೆ ಯಾದಗಿರಿ ಯಲ್ಲಿ ನಾಡ ಬಂದೂಕಿನಿಂದ ಸಿಡಿಮದ್ದು ಸಿಡಿಸಿ ಸ್ವಾಗತ ಕೋರಿರುವುದನ್ನು ಕಟೀಲ್ ಸಮರ್ಥಿಸಿಕೊಂಡಿದ್ದಾರೆ. ಮಡಿಕೇರಿ ಸೇರಿ ಕೆಲವೆಡೆ ನಾಡ ಬಂದೂಕಿನಿಂದ ಮದ್ದು ಸಿಡಿಸಿ ಸ್ವಾಗತ ಕೋರುವ ಪದ್ಧತಿಯಿದೆ. ಹಾಗಾಗಿ ನಾಯಕರು ಬಂದ ವೇಳೆ ಬೆಂಬಲಿಗರು ನಾಡಬಂದೂಕಿನಿಂದ ಗುಂಡು ಹಾರಿಸಿದ್ದಾರೆ ಎಂದರು. ಆದರೆ ಪೊಲೀಸರ ತಲೆದಂಡವೇಕೆ ಎಂಬ ಪ್ರಶ್ನೆಗೆ ಉತ್ತರಿಸಲಾಗದೆ, ಗೃಹ ಇಲಾಖೆ ತನಿಖೆ ನಂತರವೇ ಸ್ಪಷ್ಟವಾಗಲಿದೆ ಎಂದು ಹೇಳಿ ಜಾರಿಕೊಂಡರು.
ಸಚಿವ ಸಂಪುಟ ವಿಸ್ತರಣೆ, ಖಾತೆಗಳ ಹಂಚಿಕೆ ಬಳಿಕ ತುರ್ತಾಗಿ ಇತ್ಯರ್ಥವಾಗಬೇಕಾದ ಮತ್ತೊಂದು ಸವಾಲು ಸಿಎಂ ಬೊಮ್ಮಾಯಿ ಮುಂದಿದೆ. ಎಲ್ಲರನ್ನೂ ತೃಪ್ತಿಪಡಿಸುವ ನಿರ್ಧಾರ ಸಾಧ್ಯವಾಗದಿದ್ದರೆ ಮತ್ತೊಂದು ರೀತಿಯ ಅಪಸ್ವರ ಕೇಳಿ ಬರಲಿದ್ದು, ವರಿಷ್ಠರು ಬೆನ್ನಿಗೆ ನಿಂತಿರುವ ನಿರಾಯಾಸವಾಗಿ ಹಂಚಿಕೆ ಮಾಡುವ ವಿಶ್ವಾಸದಲ್ಲಿದ್ದಾರೆ. ಕರೊನಾ ನಿಯಂತ್ರಣ, ಪ್ರವಾಹ ಪರಿಹಾರ ಪರಿಶೀಲನೆ ಹಾಗೂ ಆ.15ರ ರಾಷ್ಟ್ರ ಧ್ವಜಾರೋಹಣದ ಜವಾಬ್ದಾರಿ ನಿರ್ವಹಿಸಲೆಂದು ತಾತ್ಪೂರ್ತಿಕವಾಗಿ ಸಚಿವರಿಗೆ ಜಿಲ್ಲೆಗಳನ್ನು ಹಂಚಿದ್ದರು. ಅದೇ ಸಚಿವರು ಆಯಾ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮುಂದುವರಿಯಲಿದ್ದಾರೆಯೇ? ಅಥವಾ ಬದಲಾವಣೆ ಗಳಾಗಲಿವೆಯೇ? ಎಂಬ ಕುತೂಹಲ ಗರಿಗೆದರಿದೆ. ಸಂಪುಟದಲ್ಲಿ ಪ್ರಾತಿನಿಧ್ಯ ವಂಚಿತ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರ ನೇಮಕವೂ ಬೊಮ್ಮಾಯಿಗೆ ತಲೆನೋವಾಗುವ ಲಕ್ಷಣಗಳಿವೆ.