

ಹೊನ್ನಾವರ: ಶರಾವತಿ ನೀರನ್ನು ಬೇರೆ ತಾಲೂಕುಗಳಿಗೆ ಪೂರೈಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿರುವುದನ್ನು ವಿರೋಧಿಸಿ ಪಟ್ಟಣದಲ್ಲಿ ಹಲವು ಸಂಘಟನೆಗಳ ಪ್ರಮುಖರು ಬುಧವಾರ ಸಭೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಬೇಸಿಗೆಯ ಕೊನೆಯಲ್ಲಿ ಸಮುದ್ರದ ಉಪ್ಪು ನೀರು ಸುಮಾರು 25 ಕಿ.ಮೀ ಉದ್ದಕ್ಕೆ ನದಿ ನೀರಿಗೆ ಹಿಮ್ಮುಖವಾಗಿ ಸೇರ್ಪಡೆಯಾಗುತ್ತದೆ. ಇದರಿಂದ ತಾಲೂಕಿನ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಬೆಳೆ ಹಾಳಾಗಿ ರೈತರು ಸಂಕಷ್ಟ ಪಡುವಂತಾಗಿದೆ. ಶರಾವತಿ ನದಿಪಾತ್ರದಲ್ಲಿ 10ಕ್ಕೂ ಹೆಚ್ಚು ಏತ ನೀರಾವರಿ ಯೋಜನೆಗಳ ಮೂಲಕ ಕೃಷಿ ಭೂಮಿಗೆ ಸರ್ಕಾರ ಈಗಾಗಲೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿದೆ. ಶರಾವತಿಯಿಂದ ಹೊನ್ನಾವರ ನಗರ ಮತ್ತು ಗ್ರಾಮೀಣ ಭಾಗಕ್ಕೆ ಮತ್ತು ಮುರ್ಡೇಶ್ವರ, ಇಡಗುಂಜಿ ಯಾತ್ರಾ ಸ್ಥಳವು ಸೇರಿದಂತೆ ಈ ಭಾಗದ ಲಕ್ಷಾಂತರ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲಾಗಿದೆ. ಹಿಂದೆ ಸಮುದ್ರ ಸೇರುತ್ತಿದ್ದ ಪೂರ್ಣ ಪ್ರಮಾಣದ ನೀರು ಈಗ ಈ ಭಾಗದ ಕುಡಿಯುವ ನೀರಿನ ಪೂರೈಕೆಗೆ ಹಾಗೂ ಏತ ನೀರಾವರಿ ಯೋಜನೆಗಳಿಗೆ ಬಳಕೆಯಾಗುತ್ತಿದೆ.
ನದಿಯಲ್ಲಿ ಸಿಹಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿದೆ. ಇದು ನದಿಪಾತ್ರದ ರೈತರ ಮತ್ತು ಕುಡಿಯುವ ನೀರನ್ನು ಅವಲಂಬಿಸಿರುವ ಲಕ್ಷಾಂತರ ಜನರ ಆತಂಕಕ್ಕೆ ಕಾರಣವಾಗಿದೆ. ಇದರಿಂದಾಗಿ ಇನ್ನು ಮುಂದೆ ಶರಾವತಿಯಿಂದ ಬೇರೆ ತಾಲೂಕುಗಳಿಗೆ ನೀರು ಪೂರೈಸುವ ಹೊಸ ಯೋಜನೆಗಳಿಗೆ ಕಡಿವಾಣ ಹಾಕಬೇಕು ಎಂದು ಶರಾವತಿ ನದಿಪಾತ್ರದ ಜನರು ಸರ್ಕಾರದ ಗಮನ ಸೆಳೆದರು.
ಶರಾವತಿ ನೆರೆ ಸಂತ್ರಸ್ತರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ಭಾರತ ಸೇವಾ ದಳದ ಅಧ್ಯಕ್ಷ ಯೋಗೀಶ ರಾಯ್ಕರ್, ಬಿಜೆಪಿ ತಾಲೂಕು ಅಧ್ಯಕ್ಷ ಮಂಜುನಾಥ ನಾಯ್ಕ, ಹೊನ್ನಾವರ ಉಳಿಸಿ ಬೆಳೆಸಿ ಸಂಘಟನೆ ಅಧ್ಯಕ್ಷ ಜಿ.ಎನ್. ಗೌಡ, ದೇವರಾಜ ಅರಸು ವಿಚಾರ ವೇದಿಕೆ ಅಧ್ಯಕ್ಷ ಅನಂತ ನಾಯ್ಕ ಹೆಗ್ಗಾರ, ವಿನೋದ ನಾಯ್ಕ, ಕೇಶವ ನಾಯ್ಕ ಬಳ್ಕೂರು, ರಾಜೇಶ ತಾಂಡೇಲ್, ವಿನಾಯಕ ನಾಯ್ಕ, ಪ್ರಭುಕುಮಾರ ಹಳ್ಳೇರ, ಜಿ.ಟಿ. ಹಳ್ಳೇರ ಇತರರು ಇದ್ದರು. ತಹಸೀಲ್ದಾರ್ ರವಿರಾಜ ದೀಕ್ಷಿತ್ ಮನವಿ ಸ್ವೀಕರಿಸಿದರು.