ಕಾಯ್ದೆ ವಿರೋಧಿಸುವುದು ಬೂಟಾಟಿಕೆಯ ಪರಮಾವಧಿ

12 Dwd 3
Published on

ಧಾರವಾಡ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಿಂದ ದೇಶದ ಮುಸ್ಲಿಮರಿಗೆ ತೊಂದರೆ ಇಲ್ಲ. ಕಾಯ್ದೆಯ ಬಗ್ಗೆ ಸುಖಾಸುಮ್ಮನೆ ಗೊಂದಲ ಸೃಷ್ಟಿಸಿ ವಿರೋಧಿಸುತ್ತಿರುವುದು ಬೂಟಾಟಿಕೆಯ ಪರಮಾವಧಿ ಎಂದು ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಿವೇಕ ರೆಡ್ಡಿ ಹೇಳಿದರು.

ನಗರದ ಸರಸ್ವತಿ ನಿಕೇತನ ಸಭಾಭವನದಲ್ಲಿ ಹು-ಧಾ ಪಶ್ಚಿಮ ವಿಧಾನಸಭೆ ಕ್ಷೇತ್ರದ ವತಿಯಿಂದ ಭಾನುವಾರ ಸಂಜೆ ಆಯೋಜಿಸಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾಯ್ದೆಯ ಬಗ್ಗೆ ಬಹಳ ಗೊಂದಲ ಸೃಷ್ಟಿಯಾಗಿದೆ. ರಾಮ ಜನ್ಮಭೂಮಿ, ಜಮ್ಮು ಕಾಶ್ಮೀರದ ಕಲಂ 370 ರದ್ದತಿ ಕೂಡ ಇಷ್ಟು ಗೊಂದಲ ಸೃಷ್ಟಿಸಿರಲಿಲ್ಲ. ಕಾಯ್ದೆ ವಿರುದ್ಧ ಪ್ರತಿಪಕ್ಷಗಳಿಂದ ಆಟ ಆಡುವ ಪ್ರಯತ್ನ ನಡೆದಿದೆ. ದೇಶದ ಒಳಿತಿನ ವಿರುದ್ಧ ಮಾತುನಾಡುತ್ತಿರುವುದು ದುರ್ದೈವದ ಸಂಗತಿ. ಧಾರ್ವಿುಕ ಕಿರುಕುಳದಿಂದ ಭಾರತಕ್ಕೆ ಬಂದವರಿಗೆ ಕಾಯ್ದೆಯಡಿ ಪೌರತ್ವ ನೀಡಲಾಗುತ್ತದೆ. ಆದರೆ ಬಾಂಗ್ಲಾದೇಶ, ಅಫ್ಘಾನಿಸ್ತಾನ, ಪಾಕಿಸ್ತಾನದ ಮುಸ್ಲಿಮರು ನಿರಾಶ್ರಿತರಲ್ಲ ಎಂದರು.

ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗೆ ಕುಮ್ಮಕ್ಕು ನೀಡಲಾಗುತ್ತಿದೆ. ಪ್ರತಿಪಕ್ಷಗಳ ವಾದಗಳಿಗೆ ನಮ್ಮಲ್ಲಿ ತಕ್ಕ ಉತ್ತರವಿದೆ. ನಿರಾಶ್ರಿತರಿಗೆ ಪೌರತ್ವ ನೀಡಬೇಕು ಎಂದು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಹೇಳಿದ್ದರು. ಇಂದು ಕಾಂಗ್ರೆಸ್​ನವರು ಯು ಟರ್ನ್ ಹೊಡೆದು ರಾಜಕೀಯ ಲಾಭ ಪಡೆಯಲು ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಆಶ್ರಯ ಬಯಸಿ ಬರುವ ನಿರಾಶ್ರಿತರಿಗೆ ಭಾರತ ನಿರಂತರ 2000 ವರ್ಷಗಳಿಂದ ಆಶ್ರಯ ಕೊಡುತ್ತ ಬಂದ ರಾಷ್ಟ್ರ. ಅಂಥ ರಾಷ್ಟ್ರವನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮ ಮೇಲಿದೆ. ಭವಿಷ್ಯದ ಭಾರತ ಚೆನ್ನಾಗಿ ಇರಬೇಕಾದರೆ ಈ ಕಾಯ್ದೆ ಅಗತ್ಯ. ಅದನ್ನು ಬೆಂಬಲಿಸೋಣ, ಇತರರಿಗೂ ಅರಿವು ಮೂಡಿಸೋಣ ಎಂದರು.

ಹು-ಧಾ ಮಹಾನಗರ ಜಿಲ್ಲಾಧ್ಯಕ್ಷ ನಾಗೇಶ ಕಲಬುರ್ಗಿ, ವಿಭಾಗೀಯ ಸಂಘಟನಾ ಕಾರ್ಯದರ್ಶಿ ಜಯತೀರ್ಥ ಕಟ್ಟಿ, ಬಸವರಾಜ ಗರಗ, ಸಂಜಯ ಕಪಟಕರ, ದತ್ತಮೂರ್ತಿ ಕುಲಕರ್ಣಿ, ಕಲ್ಮೇಶ ಹಾವೇರಿಪೇಟ ಹಾಗೂ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net