

ಎನ್.ಆರ್.ಪುರ: ಮೆಣಸೂರು ಗ್ರಾಮ ಪಂಚಾಯಿತಿಯ ಬಡಗಬೈಲು ಗ್ರಾಮದ ಕಟಗಳಲೆಯ ಸರ್ವೇ ನಂ. 77ರಲ್ಲಿ ಬಯೋ ಘನ ತ್ಯಾಜ್ಯ ಘಟಕ ಸ್ಥಾಪನೆ ವಿರೋಧಿಸಿ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರು ಶನಿವಾರ ಶಾಸಕ, ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಬಡಗಬೈಲು ಗ್ರಾಮದ ಕಟಗಳಲೆಯಲ್ಲಿ ಸರ್ವೇ.ನಂ.77ರಲ್ಲಿ ಬಯೋಘನ ತ್ಯಾಜ್ಯ ಘಟಕ ಯೋಜನೆಗೆ ಕಂದಾಯ ಇಲಾಖೆಯಿಂದ ಒಂದು ಎಕರೆ ಜಾಗ ಮಂಜೂರು ಮಾಡಲು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ ನಡೆದು ನಕ್ಷೆ ತಯಾರಿಸಿ ಕಡತ ವಿಲೇವಾರಿ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಈ ಬಗ್ಗೆ ಗ್ರಾಮಸ್ಥರು, ಗ್ರಾಪಂ ಗಮನಕ್ಕೆ ತಾರದೆ, ಸಾಧಕ, ಬಾಧಕ ಪರಿಶೀಲಿಸದೆ ಜಾಗ ಗುರುತು ಮಾಡುತ್ತಿದ್ದಾರೆ ಎಂದು ದೂರಿದರು.
ಘಟಕಕ್ಕೆ ಗುರುತು ಮಾಡಿರುವ ಜಾಗದ ಸುತ್ತ ಮುತ್ತಾ 300 ಮನೆಗಳು, ದೇವಸ್ಥಾನ, ಚರ್ಚ್,ಹಿಂದು ರುದ್ರಭೂಮಿ ಇದೆ. ಇಲ್ಲಿ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿದರೆ ಸಾರ್ವಜನಿಕರಿಗೆ ಆರೋಗ್ಯದ ಸಮಸ್ಯೆ ಉಂಟಾಗಲಿದೆ. ಆದ್ದರಿಂದ ಘನ ತ್ಯಾಜ್ಯ ವಿಲೇವಾರಿ ಘಟಕವನ್ನು ಈ ಜಾಗದಿಂದ ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಮೆಣಸೂರು ಗ್ರಾಪಂ ಅಧ್ಯಕ್ಷೆ ರಚಿತ, ಸದಸ್ಯರಾದ ಡಿ.ಆರ್.ಶ್ರೀನಾಥ್, ಬಿನು, ಎಲ್ದೋ, ಬಿಂದು ಸತೀಶ್, ಮುಖಂಡರಾದ ಕಟಗಳಲೆ ಲೋಕೇಶ್, ಚಂದ್ರೇಶೇಖರ್, ಅಭಿಲಾಶ್ ಮತ್ತಿತರರು ಇದ್ದರು.