

ವಿಜಯವಾಣಿ ಸುದ್ದಿಜಾಲ ಧಾರವಾಡ
ಸಾರ್ವಜನಿಕರ ತ್ವರಿತ ಹಾಗೂ ಪಾರ್ಸಲ್ ಅಂಚೆ ವಿಂಗಡಣೆ ಶಾಖೆಯನ್ನು (ರೈಲ್ವೆ ಮೇಲ್ ಸರ್ವೀಸ್) ಹುಬ್ಬಳ್ಳಿಗೆ ಸ್ಥಳಾಂತರ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ಒತ್ತಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಚೆ ವಿಂಗಡಣೆ ಕಚೇರಿಯ ಸ್ಥಳಾಂತರದಿ0ದ ಕಚೇರಿ ವ್ಯಾಪ್ತಿಯ ಜಿಲ್ಲೆಗಳ ಗ್ರಾಹಕರ ಅಂಚೆ ಸೇವೆ ವಿಳಂಬವಾಗಲಿದೆ. ಈ ಮೊದಲು ಪತ್ರಗಳು, ಪುಸ್ತಕಗಳು, ಕರಪತ್ರಗಳು ಇತರೆ ತ್ವರಿತ ಸೇವೆಗಳ ಆಯಾ ಜಿಲ್ಲಾ ಅಂಚೆ ಕಚೇರಿಯಲ್ಲಿ ತ್ವರಿತ ಗತಿಯಲ್ಲಿ ಬಟವಡೆಯಾಗುತ್ತಿದ್ದವು. ಹಾವೇರಿ ಜಿಲ್ಲೆಯ ಕುಮಾರಪಟ್ಟಣ0 ಹುಬ್ಬಳ್ಳಿಯಿಂದ 130 ಕಿ.ಮೀ ದೂರವಿದೆ. ಹಾವೇರಿಯಿಂದ ಪೋಸ್ಟ್ ಮಾಡಿದ ಪತ್ರಗಳು ಹುಬ್ಬಳ್ಳಿಗೆ ಬಂದು ಬಟವಡೆಯಾದ ಬಳಿಕ ಬೆಂಗಳೂರು ಸೇರಿ ಇತರ ನಿಗದಿತ ಸ್ಥಳ ತಲುಪುವುದು ವಿಳಂಬವಾಗಲಿದೆ ಎಂದರು.
ಕಚೇರಿ ಸ್ಥಳಾಂತರದಿ0ದ ಗ್ರಾಹಕರ ಸಮಯ, ಹಣ ಪೋಲಾಗಲಿದೆ. ಆದ್ದರಿಂದ ಸಾರ್ವಜನಿಕರ ತ್ವರಿತ ಪಾರ್ಸಲ್ ಅಂಚೆ ವಿಂಗಡಣೆ ಧಾರವಾಡ ಶಾಖೆಯನ್ನು ಹುಬ್ಬಳ್ಳಿಗೆ ಸ್ಥಳಾಂತರ ತಡೆಹಿಡಿಯಬೇಕು. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಬಸವರಾಜ ಬೊಮ್ಮಾಯಿ ಹಾಗೂ ಕರ್ನಾಟಕ ವೃತ್ತದ ಮುಖ್ಯ ಅಂಚೆ ಮಹಾಪಾಲಕರಿಗೆ ಪತ್ರ ಬರೆದು ಒತ್ತಾಯಿಸಲಾಗಿದೆ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಪ್ರೊ. ಕೆ.ಎಸ್. ಕೌಜಲಗಿ ಸುದ್ದಿಗೋಷ್ಠಿಯಲ್ಲಿದ್ದರು.