ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ; ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ

26 Nela Ph 02 Protest
Published on

ನೆಲಮಂಗಲ: ತೈಲ, ಅಡುಗೆ ಅನಿಲ ಸಿಲಿಂಡರ್ ಸೇರಿ ಆಗತ್ಯವಸ್ತುಗಳ ಏರಿಕೆ ಖಂಡಿಸಿ ಯುವಶಕ್ತಿ ಸಂಸ್ಥೆ ನೇತೃತ್ವದಲ್ಲಿ ವಿವಿಧ ಕನ್ನಡ ಮತ್ತು ಜನಪರ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವು.

ನಗರದ ಕವಾಡಿ ಮಠದ ಎದುರು ಮಂಗಳವಾರ ಸಮಾವೇಶಗೊಂಡ ವಿವಿಧ ಕನ್ನಡ ಮತ್ತು ಜನಪರ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. ಅಣಕು ಶವಯಾತ್ರೆ ಮೂಲಕ ನಗರದ ತಾಲೂಕು ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದರು.

ಯುವಶಕ್ತಿ ಸಂಸ್ಥೆ ತಾಲೂಕು ಸಂಯೋಜಕ ಚಿಕ್ಕಮಾರಹಳ್ಳಿ ಅನಂತ್ ಮಾತನಾಡಿ, ದೇಶಾದ್ಯಂತ ಕೋಟ್ಯಂತರ ಮಂದಿ ನಿತ್ಯ ಸಂಚಾರಕ್ಕೆ ವಾಹನಗಳನ್ನೇ ಅವಲಂಬಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳದಿಂದ ಅಗತ್ಯವಸ್ತುಗಳ ಬೆಲೆಯೂ ಹೆಚ್ಚಾಗಿದೆ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು.

ಇತ್ತೀಚೆಗೆ ರಾಜ್ಯ ಸರ್ಕಾರ ಭಾರಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಶೇ.40 ಕಮಿಷನ್ ಪಡೆದು ಕಾಮಗಾರಿ ಕೈಗೊಳ್ಳುತ್ತಿದೆ. ತನ್ಮೂಲಕ ಸರ್ಕಾರ ಜನಸಾಮಾನ್ಯರಿಗೆ ಅನ್ಯಾಯ ಎಸಗುತ್ತಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಸಾಕಷ್ಟು ಅಕ್ರಮ ನಡೆದಿದ್ದರೂ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಇನ್ನಾದರೂ ಎಚ್ಚೆತ್ತುಕೊಂಡು ಜನಸಾಮಾನ್ಯರ ಪರವಾಗಿ ಅಧಿಕಾರ ನಡೆಸಬೇಕು ಎಂದರು.

ಕರ್ನಾಟಕ ರಣಧೀರರ ವೇದಿಕೆ ಅಧ್ಯಕ್ಷ ಆರ್.ಶಂಕರೇಗೌಡ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ನೊಂದವರ ಕಣ್ಣೀರು ಒರೆಸುವಲ್ಲಿ ಸಂಪೂರ್ಣ ವಿಲವಾಗಿವೆ. ಬೆಲೆ ಏರಿಕೆ, ರೈತ ಮತ್ತು ಕಾರ್ಮಿಕ ವಿರೋಧಿ ನೀತಿ ಜಾರಿಗೊಳಿಸಿ, ಅನ್ಯಾಯ ಮಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ವಿಶೇಷ ತಹಸೀಲ್ದಾರ್ ಪ್ರಕಾಶ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದರು. ಕನ್ನಡ ರಣಧೀರರ ಪಡೆ ಅಧ್ಯಕ್ಷ ಚೇತನ್‌ಗೌಡ, ಕರವೇ ಕನ್ನಡಿಗರ ಧ್ವನಿ ಸಂಘಟನೆ ಅಧ್ಯಕ್ಷ ಮಲ್ಲೇಶ್, ಮಾದಿಗ ಮಹಾಸಭಾ ತಾಲೂಕು ಅಧ್ಯಕ್ಷ ಜಿ.ಎನ್. ಕನಕರಾಜು, ಕಾಂಗ್ರೆಸ್ ಮಹಿಳ ಘಟಕದ ಅಧ್ಯಕ್ಷೆ ನಾಗರತ್ನಾ, ಸಾಹಿತಿ ಎನ್.ಆರ್. ನಾಗರಾಜು, ಯುವಶಕ್ತಿ ಸಂಸ್ಥೆ ಸಂಚಾಲಕ ಮದನ್, ಮುಖಂಡರಾದ ರಂಜಿತಾ, ಚೇತನ್, ಪವಿತ್ರಾ, ಹೇಮಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net