ಕಲಾಪದಲ್ಲಿ ಲಿಂಕ್​ ಕೆನಾಲ್​ ವಿರೋಧಿಸಿ

protest
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತುಮಕೂರಿನಲ್ಲಿ ರಾಜ್ಯ ರೈತ ಸಂದ ನೇತೃತ್ವದಲ್ಲಿ ಪ್ರತಿಭಟಿಸಲಾಯಿತು. ಮಹಿಳಾ ಘಟಕದ ಅಧ್ಯಕ್ಷೆ ನಾಗರತ್ನಮ್ಮ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ದೊಡ್ಡಮಾಳಯ್ಯ, ತಾಲೂಕು ಅಧ್ಯಕ್ಷರಾದ ಚಿಕ್ಕಬೋರೇಗೌಡ, ವೆಂಕಟೇಗೌಡ, ಲಕ್ಷ್ಮಣಗೌಡ, ಡಿ.ಆರ್​.ರಾಜಶೇಖರ್​, ಕೆಂಚಪ್ಪ, ಸಿ.ಜಿ.ಲೋಕೇಶ್​, ರಂಗಹನುಮಯ್ಯ, ಶಬ್ಬೀರ್​ಪಾಷ, ತಿಮ್ಮೇಗೌಡ, ರವೀಶ್​ ಇತರರು ಇದ್ದರು.
Published on

ಜಿಲ್ಲೆಯ ಜನಪ್ರತಿನಿಧಿಗಳಿಗೆ ರೈತ ಸಂಘ ಮನವಿ | ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

ತುಮಕೂರು: ಹೇಮಾವತಿ ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ವಿರುದ್ಧ ಜಿಲ್ಲೆಯ ಎಲ್ಲ ಶಾಸಕರು ವಿಧಾನಮಂಡಲದ ಸದನದ ಒಳಗೆ, ಹೊರಗೆ ಧ್ವನಿ ಎತ್ತುವಂತೆ ಆಗ್ರಹಿಸಿ ರಾಜ್ಯ ರೈತ ಸಂದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟಿಸಲಾಯಿತು.

ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ನೇತೃತ್ವದಲ್ಲಿ ನೂರಾರು ರೈತರು ಪ್ರತಿಭಟಿಸಿ, ಹೇಮಾವತಿ ಲಿಂಕ್​ ಕೆನಾಲ್​ನಿಂದ ಜಿಲ್ಲೆಯ ಹೇಮಾವತಿ ನೀರಿಗೆ ಕುತ್ತು ಬರಲಿದೆ. ಜಾತಿ, ಪಕ್ಷದ ಲಾಬಿಗೆ ಮಣಿದು ಇಂತಹ ಅನ್ಯಾಯ ತಡೆಯಲು ಮುಂದಾಗದಿದ್ದರೆ ಮುಂದಿನ ಪೀಳಿಗೆಗೆ ವಿಷ ಕೊಟ್ಟಂತಾಗಲಿದೆ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.

ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಎ.ಗೋವಿಂದರಾಜು, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್​ ಸರ್ಕಾರ ಚುನಾವಣಾ ಪೂರ್ವದಲ್ಲಿ ನೀಡಿದ್ದ ಭರವಸೆಯಂತೆ,ರೈತರಿಗೆ ಮಾರಕವಾಗಿರುವ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ಹಾಗೂ ಗೋ ಹತ್ಯೆ ನಿಷೇಧ ಕಾಯ್ದೆ ವಾಪಸ್​ ಪಡೆಯುವುದಾಗಿ ಹೇಳಿದ್ದು, ಕೊಟ್ಟ ಮಾತಿಗೆ ತಪ್ಪಿದೆ. ಅಲ್ಲದೆ, ಸರ್ಕಾರದ ನೀತಿಗಳಿಂದಾಗಿ ರೈತರ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿವೆ. ರೈತರನ್ನು ಎದುರು ಹಾಕಿಕೊಂಡು ಸರ್ಕಾರ ಉಳಿದ ಉದಾಹರಣೆಯಿಲ್ಲ. ಹಾಗಾಗಿ ಕೂಡಲೇ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಜಿಲ್ಲೆಯೂ ಸೇರಿ ರಾಜ್ಯದಲ್ಲಿ ಅರಣ್ಯ ಇಲಾಖೆ ಮತ್ತು ಬಗರ್​ ಹುಕುಂ ಸಾಗುವಳಿದಾರರ ನಡುವಿನ ಸಂಘರ್ಷ ಹೆಚ್ಚಾಗಿದೆ. ಹತ್ತಾರು ವರ್ಷಗಳಿಂದಲೂ ಭೂಮಿ ಉಳುಮೆ ಮಾಡುತ್ತಾ ಬಂದಿದ್ದರೂ ಒಂದಿಲ್ಲೊಂದು ಕಾರಣ ನೀಡಿ, ಸಾಗುವಳಿ ಚೀಟಿ ನೀಡುತ್ತಿಲ್ಲ. ಅಲ್ಲದೆ, ವಿವಿಧ ಕಾರಣಗಳಿಂದ ರಾಜ್ಯದಲ್ಲಿ ಕಳೆದ ಏಪ್ರಿಲ್​ನಿಂದ ಈವರೆಗೆ 1182 ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೃಷಿ ಉತ್ಪನ್ನಗಳಿಗೆ ಸಮರ್ಪಕ ಬೆಲೆ ಸಿಗದಿರುವುದು ರೈತರ ಆತ್ಮಹತ್ಯೆಯ ಹಿಂದಿನ ಪ್ರಮುಖ ಕಾರಣವಾಗಿದೆ. ಇದನ್ನು ತಡೆಯಲು ಸರ್ಕಾರ ಕೃಷಿ ಬೆಲೆ ನಿಗದಿ ಆಯೋಗದ ಶಿಫಾರಸುಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಬರಗಾಲದ ನಡುವೆಯೂ ಬ್ಯಾಂಕ್​ಗಳು ಸಾಲ ವಸೂಲಿಗೆ ರೈತರ ಜಮೀನುಗಳನ್ನು ಹರಾಜು ಹಾಕುತ್ತಿರುವುದು ಮುಂದುವರಿದಿದೆ. ತುರುವೇಕೆರೆಯ ರೈತರೊಬ್ಬರ ಸಾಲಕ್ಕಾಗಿ ಈ ಹರಾಜು ಮೂಲಕ ಜಮೀನನ್ನು ಹರಾಜು ಮಾಡಿದ್ದು, ಕೂಡಲೇ ಹರಾಜು ರದ್ದು ಮಾಡಿ, ಭೂಮಿಯನ್ನು ವಾಪಸ್ಸು ನೀಡಬೇಕು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಬ್ಯಾಂಕುಗಳಿಗೆ ಸೂಕ್ತ ಸಲಹೆ ನೀಡಬೇಕೆಂದು ಗೋವಿಂದರಾಜು ಆಗ್ರಹಿಸಿದರು.

ವೈಜ್ಞಾನಿಕ ಪರಿಹಾರ ನೀಡಿ

ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್​.ಶಂಕರಪ್ಪ ಮಾತನಾಡಿ, ಪಹಣಿ ದುರಸ್ತಿ, ಹದ್ದುಬಸ್ತು, ನೋಂದಣಿ ಶುಲ್ಕ ಎಲ್ಲವೂ ದುಬಾರಿಯಾಗಿದ್ದು, ಕೂಡಲೇ ಇದನ್ನು ಕಡಿಮೆ ಮಾಡಬೇಕು. 9 ತಿಂಗಳಿನಿಂದ ಬಾಕಿ ಉಳಿಸಿಕೊಂಡಿರುವ ಹಾಲಿನ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ನೆಡ್​ ಮೂಲಕ ಖರೀದಿಸಿರುವ ರಾಗಿ, ಕೊಬ್ಬರಿಯ ಪ್ರೋತ್ಸಾಹ ಧನ ಬಿಡುಗಡೆ ಮಾಡಬೇಕು. ಎತ್ತಿನಹೊಳೆ ಮತ್ತು ಭದ್ರಾ ಮೇಲ್ಡಂಡೆ ಯೋಜನೆಗೆ ಭೂಮಿ ಕಳೆದುಕೊಂಡಿರುವ ರೈತರಿಗೆ ವೈಜ್ಞಾನಿಕ ಪರಿಹಾರ ನೀಡಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net