ಶ್ರೀ ಕ್ಷೇತ್ರ ಧರ್ಮಸ್ಥಳದ ಅವಹೇಳನ ವಿರೋಧಿಸಿ ಉಜಿರೆಯಲ್ಲಿ ಬೃಹತ್ ಸಾರ್ವಜನಿಕ ಸಭೆ

Samavesha
Published on

ಬೆಳ್ತಂಗಡಿ: ಸಾಮಾಜಿಕ ಜಾಲತಾಣಗಳಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ಸುಳ್ಳು ಆರೋಪ ಮಾಡಿ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಹಿನ್ನೆಲೆಯಲ್ಲಿ ಧರ್ಮಸ್ಥಳ ಮಂಜುನಾಥ ಸ್ವಾಮಿ ಭಕ್ತಾಭಿಮಾನಿಗಳು ಅಖಿಲ ಕರ್ನಾಟಕ ಶ್ರೀ ಮಂಜುನಾಥ ಸ್ವಾಮಿ ಭಕ್ತವೃಂದ ವತಿಯಿಂದ ಉಜಿರೆ ಶ್ರೀ ಜನಾರ್ದನ ಸ್ವಾಮಿ ರಥಬೀದಿಯಲ್ಲಿ ಶುಕ್ರವಾರ ಬೃಹತ್ ಸಾರ್ವಜನಿಕ ಸಮಾವೇಶ ನಡೆಯಿತು.

ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳ ಸಮೀಪದ ನಿವಾಸಿ ಪಾಂಗಳದ ಸೌಜನ್ಯಾ ಎಂಬ ವಿದ್ಯಾರ್ಥಿನಿಯ ಹತ್ಯೆ ಮಾಡಿದ ನೈಜ ಅಪರಾಧಿಯನ್ನು ಪತ್ತೆ ಹಚ್ಚಿ ಶಿಕ್ಷಿಸುವ ಕುರಿತಂತೆ ಹಕ್ಕೊತ್ತಾಯ ಮತ್ತು ಪ್ರಕರಣ ಮುಂದಿಟ್ಟು ಧರ್ಮಸ್ಥಳ ಕ್ಷೇತ್ರದ ಮೇಲೆ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮೇಲೆ ವೃಥಾರೋಪಗಳಿಂದ ನೊಂದಿರುವ ಆಕ್ರೋಶಿತ ಬಂಧುಗಳು, ನಾಡಿನ ಲಕ್ಷಾಂತರ ಭಕ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು.

ಸಮಾವೇಶಕ್ಕೆ ರಾಜ್ಯದ ವಿವಿಧ ಭಾಗದ ಭಕ್ತರು ಆಗಮಿಸಿ ಮಳೆಯ ಮಧ್ಯೆಯೇ ಡಾ.ಡಿ.ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಜೈಕಾರ ಕೂಗುತ್ತ ಸೌಜನ್ಯಾಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನಾ ಸಮಾವೇಶದ ಬಳಿಕ ಉಜಿರೆ ದೇವಸ್ಥಾನದಿಂದ ಉಜಿರೆ ಎಸ್‌ಡಿಎಂ ಕಾಲೇಜಿನವರೆಗೆ ಭಕ್ತರು ಪ್ರತಿಭಟನಾ ಜಾಥಾ ನಡೆಸಿದರು.

ಬಳಿಕ ಎಸ್‌ಕೆಡಿಆರ್‌ಡಿಪಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಎಲ್.ಎಚ್.ಮಂಜುನಾಥ್ ಮಾತನಾಡಿ, ಇದು ಧಮನಿತರ ಸಮಾವೇಶ, ದಶಕದಿಂದ ನೋವನ್ನು ಅನುಭವಿಸುತ್ತಿರುವವರ ಕಾರ್ಯಕ್ರಮ. ನಮ್ಮ ಸಹನೆಯ ಕಟ್ಟೆ ಒಡೆದಿದೆ. ಹುನ್ನಾರವನ್ನು ಜನ ಪ್ರಶ್ನಿಸುವ ಕಾಲ ಬಂದಿದೆ. ನಮ್ಮ ಹೋರಾಟ ನಿಲ್ಲದು, ನಾವು ನಿಮ್ಮೊಂದಿಗೆ ಇದ್ದೇವೆ ಎಂಬ ಘೋಷಣೆಯೊಂದಿಗೆ ಹಕ್ಕೊತ್ತಾಯಕ್ಕೆ ಚಾಲನೆ ನೀಡಿದರು.

ವಿಧಾನ ಪರಿಷತ್ ಸದಸ್ಯರಾದ ಕೆ.ಪ್ರತಾಪಸಿಂಹ ನಾಯಕ್, ಕೆ.ಹರೀಶ್ ಕುಮಾರ್, ಉಜಿರೆ ಜನಾರ್ದನ ಸ್ವಾಮಿ ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಶರತ್‌ಕೃಷ್ಣ ಪಡ್ವೆಟ್ನಾಯ, ಮಾಜಿ ಸಚಿವ ಅಭಯಚಂದ್ರ ಜೈನ್, ಜನಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಜಣ್ಣ ಕೊರವಿ, ತಾಲೂಕು ಅಧ್ಯಕ್ಷ ಖಾಸಿಂ ಮಲ್ಲಿಗೆಮನೆ, ಮಾಜಿ ಅಧ್ಯಕ್ಷೆ ಶಾರದಾ ರೈ, ತಿಗಳ ಸಮಾಜ ರಾಜ್ಯಾದ್ಯಕ್ಷ ಜಯರಾಜ್ ಹೊಸಕೋಟೆ, ಸುಂದರ ಗೌಡ ಇಚ್ಚಿಲ. ಎಸ್‌ಕೆಡಿಆರ್‌ಡಿಪಿ ಸಿಇಒ ಅನಿಲ್ ಕುಮಾರ್, ಜನಜಾಗೃತಿ ವೇದಿಕೆ ಸ್ಥಾಪಕಾಧ್ಯಕ್ಷ ವಸಂತ ಸಾಲ್ಯಾನ್, ಕಾಂಗ್ರೆಸ್ ಹಿರಿಯ ಮುಖಂಡ, ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net